ಬೀದರ್: ನಗರದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಬುಡಾ ಸೈಟ್ ರಿಲೀಸ್ಗಾಗಿ 50 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಯುಕ್ತರು ಹಾಗೂ ಸದಸ್ಯರನ್ನು ಬಂಧಿಸಿದ್ದಾರೆ.ಕೃಷಿಯೇತರ ಜಮೀನಿನ(ಎನ್.ಎ) ನಿವೇಶನಗಳ ಮಾರಾಟದ ಅನುಮತಿಗಾಗಿ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಶ್ರೀಕಾಂತ್ ಚಿಮಕೋಡೆ, ಬುಡಾ ಸದಸ್ಯ ಚಂದ್ರಕಾಂತ್ ರೆಡ್ಡಿ ಹಾಗೂ ಅವರ ಆಪ್ತ ಸಿದ್ದು ಹೂಗಾರ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದರ್ ನಗರದ ಚಿಕ್ಕಪೇಟೆಯಲ್ಲಿರುವ ಸರ್ವೇ ನಂಬರ್ 26ರಲ್ಲಿ ಕೃಷಿಯೇತರ ಜಮೀನಿನ ಶೇ. 60 ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ಮತ್ತು ಮಾರಾಟಕ್ಕೆ ಅನುಮತಿ ನೀಡಲು ಬುಡಾ ಆಯುಕ್ತ ಶ್ರೀಕಾಂತ್ ಹಾಗೂ ಚಂದ್ರಕಾಂತ್ ಅವರು 50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಇಂದು 10 ಲಕ್ಷ ರೂಪಾಯಿ ಮುಂಗಡ ಕೊಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ನೌಬಾದೆ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.