
ಕಾರವಾರ–ಅಂಕೋಲಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅಸಭ್ಯ ವರ್ತನೆಗೆ ಯುವತಿಯೊಬ್ಬರು ಧೈರ್ಯದಿಂದ ಪ್ರತಿಕ್ರಿಯಿಸಿ ಕಾಮುಕನಿಗೆ ತಕ್ಕ ಪಾಠ ಕಲಿಸಿದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಅಂಕೋಲಾ ಮೂಲದ ನಿಶಿಕಾ ಕಾನಡೆ ಅವರು ತಮ್ಮ ತಮ್ಮನೊಂದಿಗೆ ಮಂಗಳವಾರ ಸಂಜೆ ಅಂಕೋಲಾದಿಂದ ಕಾರವಾರದತ್ತ ತೆರಳುತ್ತಿದ್ದರು. ಪ್ರಯಾಣದ ವೇಳೆ ಬಸ್ಸಿನಲ್ಲಿ ಕುಳಿತಿದ್ದ ನಿಶಿಕಾ ನಿದ್ರೆಗೆ ಜಾರಿದ್ದರು ಎನ್ನಲಾಗಿದೆ. ಈ ಸಂದರ್ಭ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಮರ ಗುನಗಾ ಎಂಬ ವ್ಯಕ್ತಿ, ಅವರ ಮೇಲೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ನಿದ್ರೆಯಿಂದ ಎಚ್ಚರಗೊಂಡ ನಿಶಿಕಾ ಕಾನಡೆ, ತನ್ನ ಮೇಲೆ ಕೈ ಹಾಕಿರುವುದನ್ನು ಗಮನಿಸಿದ ತಕ್ಷಣ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಆದರೆ ಆತ ಅಸಭ್ಯ ಭಾಷೆ ಬಳಸಿದಾಗ ನಿಶಿಕಾ ಧೈರ್ಯದಿಂದ ಪ್ರತಿರೋಧ ತೋರಿಸಿ ಆತನಿಗೆ ಎಚ್ಚರಿಕೆ ನೀಡಿದ್ದು, ಎರಡು ಬಾರಿ ಹೊಡೆದು ತಿರುಗೇಟು ನೀಡಿದ್ದಾರೆ.

ಈ ವೇಳೆ ನಡೆದ ಘಟನೆಗಳನ್ನು ನಿಶಿಕಾ ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದು, ನಂತರ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ವಿಡಿಯೋದಲ್ಲಿ ವಿವರಿಸಿರುವಂತೆ, ಬಸ್ಸಿನ ಕಿಟಕಿ ಬದಿಯ ಆಸನದಲ್ಲಿ ತಮ್ಮನಿದ್ದರೆ, ಮಧ್ಯದ ಸೀಟಿನಲ್ಲಿ ನಿಶಿಕಾ ಕುಳಿತಿದ್ದರು. ಖಾಲಿ ಆಸನದಲ್ಲಿ ಬಂದು ಕುಳಿತ ಆರೋಪಿತ ವ್ಯಕ್ತಿ ಅಸಭ್ಯ ಚಳಕ ತೋರಿಸಿದ್ದಾಗಿ ಅವರು ಹೇಳಿದ್ದಾರೆ.
ಕಾರವಾರದಲ್ಲಿ ಬಸ್ ಇಳಿಯುವ ವೇಳೆ ಆರೋಪಿತ ವ್ಯಕ್ತಿಯ ದೃಶ್ಯವನ್ನೂ ನಿಶಿಕಾ ದಾಖಲಿಸಿದ್ದು, ಮಹಿಳೆಯರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಡಿಯೋ ಹಂಚಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಮಹಿಳೆಯರು ಅನ್ಯಾಯವನ್ನು ಮೌನವಾಗಿ ಸಹಿಸಬಾರದು. ಅಗತ್ಯವಿದ್ದರೆ ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು’ ಎಂಬ ಸಂದೇಶವನ್ನು ನಿಶಿಕಾ ಕಾನಡೆ ಈ ಮೂಲಕ ನೀಡಿದ್ದಾರೆ. ಅವರ ಧೈರ್ಯ ಮತ್ತು ತಕ್ಷಣದ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

