ಭಟ್ಕಳ :ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರಲ್ಲಿ ಭಟ್ಕಳ ತಾಲೂಕಿನ ಸಣಭಾವಿ ನಿವಾಸಿ ದೀಪಕ್ ನಾಗಪ್ಪ ನಾಯ್ಕ್ (23) ಹಾಗೂ ಹಡವು ಮೂಲದ ಪೆಟ್ರಿಕ್ ವಾಜ್ (63) ಸೇರಿದ್ದಾರೆ. ಅಪಘಾತದ ವೇಳೆ ದೀಪಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಮತ್ತೊಂದೆಡೆ, ತೀವ್ರವಾಗಿ ಗಾಯಗೊಂಡಿದ್ದ ಪೆಟ್ರಿಕ್ ವಾಜ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಕೊನೆಯುಸಿರೆಳೆದಿದ್ದಾರೆ.ಲಭ್ಯ ಮಾಹಿತಿಯ ಪ್ರಕಾರ, ಬೈಂದೂರು ಕಡೆಯಿಂದ ಕುಂದಾಪುರದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ದೀಪಕ್ ನಾಗಪ್ಪ ನಾಯ್ಕ್ ಅವರ ವಾಹನಕ್ಕೆ ಎದುರು ದಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ವಾಹನ ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಪೆಟ್ರಿಕ್ ವಾಜ್ ಅವರ ಪುತ್ರಿಗೂ ಗಾಯಗಳಾಗಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಳಿಕ ಗಂಗೊಳ್ಳಿ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸ್ಥಳೀಯರಲ್ಲಿ ಶೋಕದ ವಾತಾವರಣವನ್ನುಂಟು ಮಾಡಿದೆ.

