ಕುಮಟಾ:ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐಟಿಐ ವಿದ್ಯಾರ್ಥಿ ಚಿನ್ಮಯ ಪಟಗಾರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ಮತ್ತೋರ್ವ ಯುವಕ ತಿಲಕ ಗೌಡ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.ಮೃತ ಚಿನ್ಮಯ ಪಟಗಾರ್ ಅವರು ಕುಮಟಾ ತಾಲೂಕಿನ ಹೆಗಡೆ ನಿವಾಸಿಯಾಗಿದ್ದರು. ಅವರು ತಮ್ಮ ಸ್ನೇಹಿತ ಹಾಗೂ ಯಾಣ ನಿವಾಸಿ ತಿಲಕ ಗೌಡ ಅವರೊಂದಿಗೆ ಮಂಗಳವಾರ ಬೈಕ್‌ನಲ್ಲಿ ಕುಮಟಾದಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದರು. ಇಬ್ಬರೂ ಅಂಕೋಲಾದ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬರ್ಗಿ ಸಮೀಪ ತಲುಪಿದ ವೇಳೆ ಅಪರಿಚಿತ ವಾಹನವೊಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡರು.
ಸ್ಥಳೀಯರ ನೆರವಿನಿಂದ ಹಾಗೂ ಆಂಬುಲೆನ್ಸ್ ಮೂಲಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಚಿನ್ಮಯ ಪಟಗಾರ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ತಿಲಕ ಗೌಡ ಅವರಿಗೆ ಮಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಈ ಸಂಬಂಧ ಅಪಘಾತಕ್ಕೆ ಕಾರಣವಾದ ವಾಹನ ಮತ್ತು ಅದರ ಚಾಲಕನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

