ಭಟ್ಕಳ: ಕಂಪ್ಯೂಟರ್ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಕಟಿಸಿರುವ ಕರಡು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಬೇಕು ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ರಿ.) (AIITA) ಆಗ್ರಹಿಸಿದೆ. ವಿಶೇಷವಾಗಿ ಪಿಯುಸಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು ಎಂಬ ಷರತ್ತನ್ನು ತೆಗೆದುಹಾಕಿ, ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಜೂನ್ 29ರಂದು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆ ಸಂಖ್ಯೆ EP 50 DPI 2026 ಸಂಬಂಧ ಸಂಘದ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸಿದ್ದು, ಕರಡು ನಿಯಮದಲ್ಲಿನ ಕೆಲವು ಅಂಶಗಳು ಅನೇಕ ಅಭ್ಯರ್ಥಿಗಳಿಗೆ ಅನ್ಯಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕರಡು ನಿಯಮದ ಪ್ರಕಾರ, ಕಂಪ್ಯೂಟರ್ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿತಿರಬೇಕು. ಜೊತೆಗೆ ಪಿಯುಸಿಯಲ್ಲಿಯೂ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರುವುದು ಕಡ್ಡಾಯ ಎಂಬ ಹೊಸ ಷರತ್ತು ಸೇರಿಸಲಾಗಿದೆ. ಆದರೆ ರಾಜ್ಯದ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯುವ ನಿಯಮ ಇಲ್ಲದ ಕಾರಣ, ವಿದ್ಯಾರ್ಥಿಗಳು ತಮ್ಮ ಆಯ್ಕೆಯಂತೆ ಇಂಗ್ಲಿಷ್, ಉರ್ದು, ಹಿಂದಿ ಸೇರಿದಂತೆ ಇತರ ಭಾಷೆಗಳನ್ನು ಅಧ್ಯಯನ ಮಾಡುತ್ತಾರೆ ಎಂದು ಸಂಘ ಗಮನ ಸೆಳೆದಿದೆ.
ವಿಶೇಷವಾಗಿ ಉರ್ದು ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ಅನೇಕ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಇಂಗ್ಲಿಷ್ ಮತ್ತು ಉರ್ದು ಭಾಷೆಗಳನ್ನು ಆಯ್ಕೆ ಮಾಡುವುದು ಸಾಮಾನ್ಯವಾಗಿದೆ. ಇಂತಹ ಅಭ್ಯರ್ಥಿಗಳು ಬಿ.ಇಡಿ. ಸೇರಿದಂತೆ ಕಂಪ್ಯೂಟರ್ ಶಿಕ್ಷಕರ ಹುದ್ದೆಗೆ ಅಗತ್ಯವಿರುವ ಎಲ್ಲ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದರೂ, ಪಿಯುಸಿಯಲ್ಲಿ ಕನ್ನಡವನ್ನು ಕಲಿತಿಲ್ಲ ಎಂಬ ಒಂದೇ ಕಾರಣಕ್ಕೆ ಸರ್ಕಾರಿ ಉದ್ಯೋಗದ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.
ಈ ನಿಯಮವು ಶಿಕ್ಷಣ ವ್ಯವಸ್ಥೆಯ ಪ್ರಸ್ತುತ ವಾಸ್ತವಿಕತೆಗೆ ಹೊಂದಿಕೆಯಾಗುವುದಿಲ್ಲ. ಜೊತೆಗೆ ಈಗಾಗಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಸಾವಿರಾರು ಅಭ್ಯರ್ಥಿಗಳ ಉದ್ಯೋಗಾವಕಾಶವನ್ನು ಸೀಮಿತಗೊಳಿಸುವ ಸಾಧ್ಯತೆ ಇರುವುದರಿಂದ, ವಿವಿಧ ಭಾಷಾ ಹಿನ್ನೆಲೆಯ ಅಭ್ಯರ್ಥಿಗಳಿಗೆ ಇದು ಅನ್ಯಾಯವಾಗಬಹುದು ಎಂದು ಸಂಘ ಅಭಿಪ್ರಾಯಪಟ್ಟಿದೆ.
ಕನ್ನಡ ಭಾಷೆಯ ಅರಿವು ಅಗತ್ಯ ಎಂಬ ಸರ್ಕಾರದ ಉದ್ದೇಶವನ್ನು ಸಂಘ ಸ್ವಾಗತಿಸಿದೆ. ಆದರೆ ಅದರ ಮಾನದಂಡವನ್ನು ಪಿಯುಸಿಯಲ್ಲಿ ಕನ್ನಡ ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೆ, ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರುವವರು ಅಥವಾ ಸರ್ಕಾರ ನಿಗದಿಪಡಿಸಿರುವ ಕನ್ನಡ ಭಾಷಾ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನೂ ಅರ್ಹರೆಂದು ಪರಿಗಣಿಸುವಂತೆ ಕರಡು ನಿಯಮವನ್ನು ತಿದ್ದುಪಡಿ ಮಾಡಬೇಕೆಂದು ಸಂಘ ಮನವಿ ಮಾಡಿದೆ.ಕರಡು ನಿಯಮವನ್ನು ಮರುಪರಿಶೀಲಿಸಿ, ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ದೊರೆಯುವಂತೆ ಸರ್ಕಾರ ಅಗತ್ಯ ಬದಲಾವಣೆಗಳನ್ನು ತರಬೇಕು ಎಂದು ಎಐಐಟಿಎ ತನ್ನ ಮನವಿಯಲ್ಲಿ ಒತ್ತಾಯಿಸಿದೆ.

