ಶಿರಸಿ: ಶಿರಸಿಯಲ್ಲಿ ಪ್ರತಿದಿನ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಅಮಾಯಕರು ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬಸ್ ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಪದೇ ಪದೇ ಬಸ್ ಅಪಘಾತಗಳು ಸಂಭವಿಸುತ್ತಿದ್ದರ ಹಿನ್ನಲೆಯಲ್ಲಿ ಗುರುವಾರ ನೂರಕ್ಕೂ ಅಧಿಕ ಸಾರ್ವಜನಿಕರು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಮೂಲಕ ಶ್ರೀ ಮಾರಿಕಾಂಬಾ ದೇವಾಲಯದಿಂದ ಸಹಾಯಕ ಆಯುಕ್ತರ ಕಛೇರಿಗೆ ಸಾಗಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಅವರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ರಸ್ತೆ ಗುಂಡಿ ಮುಚ್ಚುವುದು, ಬಸ್ ಸಮಸ್ಯೆ, ಮಳೆ ಮಾಪನ ಯಂತ್ರ ದುರಸ್ತಿ ಸೇರಿದಂತೆ ಜನರ ಮೂಲಭೂತ ಸೌಕರ್ಯ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆ ಹಾಗೂ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು.
ನಾವೆಲ್ಲರೂ ಜೊತೆಯಾಗಿ ಎಲ್ಲ ಸಾರ್ವಜನಿಕರ ಪರವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಅಲ್ಲಿ ಇಲ್ಲಿ ನಿಂತು ಹದಗೆಟ್ಟ ವ್ಯವಸ್ಥೆ ಕುರಿತು ಮಾತನಾಡುವ ಬದಲು ಯಾಕೆ ವ್ಯವಸ್ಥೆ ಸರಿ ಮಾಡುವುದಿಲ್ಲ ಎಂದು ಅಧಿಕಾರದಿಂದ ಆಗ್ರಹಿಸಬೇಕು. ಇದು ಯಾರೊಬ್ಬರ ಹೋರಾಟ ಅಲ್ಲ, ಯಾವ ಪಕ್ಷದ ಹೋರಾಟವಲ್ಲ, ಇದು ಜನರ ಪರವಾದ ಹೋರಾಟವಾಗಿದೆ. ಶಿರಸಿಯಲ್ಲಿ ಮೊನ್ನೆ ಶ್ರೀನಗರ ಶಾಲೆಯ ಶಿಕ್ಷಕಿಯೋರ್ವಳು ಹೊಂಡ ತಪ್ಪಿಸಲು ಹೋಗಿ ಗಾಯಗೊಂಡಿದ್ದಾಳೆ. ಇನ್ನೋರ್ವ ಶಿಕ್ಷಕಿ ಗಂಭೀರ ಸ್ಥಿತಿಯಲ್ಲಿದ್ದಾಳೆ. ದಿನ ದಿನವೂ ನಗರದಲ್ಲಿ ಈ ಬಗೆಯ ರಸ್ತೆ ಗುಂಡಿಗಳಿಂದ ಅಪಾಯವಾಗುವ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇನ್ನು ಎಷ್ಟು ಜನ ಪ್ರಾಣವನ್ನು ಕಳೆದುಕೊಳ್ಳಬೇಕು. ಶಿರಸಿಯಲ್ಲಿ ಸುಮಾರು 1,500 ಕಿ.ಮೀ ಗ್ರಾಮೀಣಾಭಿವೃದ್ಧಿ ರಸ್ತೆಗಳಿವೆ. ಎಲ್ಲಿಯೂ ಕೂಡ ಗುಂಡಿ ಮುಚ್ಚುವಂತಹ ಕೆಲಸ ಆಗಿಲ್ಲ. ಪಿ.ಡಬ್ಲ್ಯೂ.ಡಿ ರಸ್ತೆಗಳದ್ದು ಇದೆ ಕತೆ. ಎಲ್ಲ ಕಡೆಯೂ ರಸ್ತೆ ಹಾಳಾಗಿದೆ. ಇದೊಂದು ಪಕ್ಷಾತೀತ ಹೋರಾಟ. ಸಮಸ್ಯೆ ಬಗೆ ಹರಿಸುವಂತೆ ನಾವೆಲ್ಲರೂ ಶಾಸಕರನ್ನು ಈ ಮೂಲಕ ಆಗ್ರಹಿಸುತ್ತೇವೆ. ಏಕೆಂದರೆ ಶಾಸಕರು ಈ ಭಾಗದ ಪ್ರಥಮ ಪ್ರಜೆ ಆಗಿದ್ದಾರೆ. ಈ ಕ್ಷೇತ್ರಕ್ಕೆ ಬರುವ ಎಲ್ಲ ಅನುದಾನವೂ ಅವರ ಆಜ್ಞೆಯಂತೆಯೇ ಬರುತ್ತದೆ. ಅದು ನಗರ ಸಭೆ ಅನುದಾನ ಆಗಿರಬಹುದು, ಪಿ.ಡಬ್ಲ್ಯೂ.ಡಿ ಆಗಿರಬಹುದು, ಪಿ.ಆರ್. ಡಿ ಆಗಿರಬಹುದು. ಹೀಗೆ ಯಾವುದೇ ಅನುದಾನ ಬರಬೇಕೆಂದರೂ ಕೂಡ ಶಾಸಕರು ಆಗ್ರಹಿಸಬೇಕಾಗುತ್ತದೆ. ಭೀಮಣ್ಣ ನಾಯ್ಕ್ ಅವರು ಶಾಸಕರಾಗಿರುವ ಕಾರಣದಿಂದ ಅವರನ್ನು ಕೇಳುತ್ತಿದ್ದೇವೆಯೇ ಹೊರತು ವೈಯಕ್ತಿಕವಾದದ್ದೇನಿಲ್ಲ ಎಂದರು.

ಎಲ್ಲ ಊರುಗಳಿಗೆ ಬಸ್ಸುಗಳು ಸರಿಯಾಗಿ ಬರುತ್ತಿಲ್ಲ. ಬಸ್ಸುಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಕೆಟ್ಟು ನಿಂತ ಬಸ್ಸುಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಸರಿಯಾದ ನಿರ್ವಹಣೆಯೇ ಇಲ್ಲ. ಸರಕಾರದ ತೆರಿಗೆ ಹಣದಿಂದ ಆಡಳಿತ ನಡೆಸುತ್ತಿದ್ದೀರಿ, ಈ ರೀತಿ ಅವ್ಯವಸ್ಥೆ ಆಗುತ್ತಿದ್ದರೂ ಪರಿಹರಿಸದೆ ಇರುವ ನಿಮಗೆ ಮಾನವೀಯತೆ ಇಲ್ಲವೇ ? ಮಾಹಿತಿ ಹಕ್ಕಿನ ಮುಖಾಂತರ ಪಡೆದ ಮಾಹಿತಿ ಅನುಗುಣವಾಗಿ ಇರುವ 149 ಬಸ್ ಗಳಲ್ಲಿ 79 ಬಸ್ 10 ಲಕ್ಷ ಕಿ.ಮೀ ಗೂ ಅಧಿಕ ದೂರ ಓಡಿದೆ. ಓಡಾಡಿ ಹದಗೆಟ್ಟ ಬಸ್ ಗಳನ್ನೇ ಇಲ್ಲಿ ಚಲಾಯಿಸುತ್ತಿದ್ದಾರೆ. ಅಂತಹ ಬಸ್ ಗಳಲ್ಲಿ ನಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲಾಗುತ್ತದೆ. ಮಕ್ಕಳ ಜೀವಗಳಿಗೆ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ? ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಆಗುವ ನಷ್ಟಕ್ಕೆ ನೀವು ಹೊಣೆ ಆಗುತ್ತೀರಾ? ಸರಕಾರ ನಡೆಸುತ್ತಿರುವವರಿಗೆ ಜ್ಞಾನವೂ ಇಲ್ಲ, ಮನುಷ್ಯತ್ವವೂ ಇಲ್ಲ. ಇಂತಹ ಹದಗೆಟ್ಟ ಆಡಳಿತ ನೀಡಲು ಸರಕಾರಕ್ಕೆ ನಾಚಿಕೆ ಆಗುವುದಿಲ್ಲವೇ ? ಎಂದು ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಶಿರಸಿ ತಾಲೂಕಿನಲ್ಲಿ ಗ್ರಾಮೀಣ ಹಾಗೂ ನಗರದ ರಸ್ತೆಗಳು ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಈ ರಸ್ತೆಯಲ್ಲಿ ಬೀಳುವವವರ ಸಂಖ್ಯೆ ಹಾಗೂ ಅಪಘಾತವಾಗುವವರ ಸಂಖ್ಯೆ ಹೆಚ್ಚಾಗಿದೆ. ಇದನೆಲ್ಲ ನೋಡಿ ಕಂಡು ಕಾಣದೆ ಇರುವ ಸರ್ಕಾರ ಸಾರ್ವಜನಿಕ ಹಿತಾಶಕ್ತಿಯಿಂದ ಹೊಂಡಗಳನ್ನು ಮುಚ್ಚುವ ಕೆಲಸವನ್ನು ಮಾಡಬೇಕು ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳನ್ನೂ ಸರಿಯಾದ ಸಮಯಕ್ಕೆ ಬಿಡುವ ಮತ್ತು ಸರಿಯಾಗಿ ನಿರ್ವಹಣೆ ಮಾಡುವ ಕೆಲಸವನ್ನು ಮಾಡಬೇಕು. ಬೆಲೆ ವಿಮೆ ರೈತರಿಗೆ ಸರಿಯಾಗಿ ಸಿಗುಲು ಮಳೆಮಾಪನ ಯಂತ್ರವನ್ನು ಸರಿಪಡಿಸಬೇಕು ಎಂದರು.
ಬಿಜೆಪಿಯ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ರೈತರ ನೋವಿಗೆ, ಸಮಸ್ಯೆಗೆ ಬೆಲೆಯೆ ಇಲ್ಲದಂತಾಗಿದೆ. ರೈತರಿಗೆ ಸರಿಯಾಗಿ ಗೊಬ್ಬರಗಳ ವಿತರಣೆ ನಡೆಯುತ್ತಿಲ್ಲ. ಪ್ರತಿದಿನ ಒಂದಲ್ಲಾ ಒಂದು ಸಮಸ್ಯೆಯಿಂದಾಗಿ ರೈತರು ಹೈರಾಣಾಗುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರಕ್ಕೆ ಸರಕಾರವನ್ನು ನಡೆಸಲು ಸಾಧ್ಯವಾದರೆ ನಡೆಸಲಿ, ಇಲ್ಲವಾದರೆ ರಾಜೀನಾಮೆ ಕೊಟ್ಟು ಹೊರ ನಡೆಯಲಿ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ನಗರ ಮಂಡಲ ಪ್ರದಾನ ಕಾರ್ಯದರ್ಶಿ ಮಹಾಂತೇಶ್ ಹಾದಿಮನಿ ಮಾತನಾಡಿ, ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಹೋರಾಟಕ್ಕೆ ಯಶಸ್ಸು ಸಿಗುತ್ತದೆ. ಶಿರಸಿ ನಗರದಲ್ಲಿ ಆದಂತಹ ಹೊಂಡಗಳಿಂದಾಗಿ ಒಂದು ಗಂಟೆ ಪ್ರಯಾಣ ಮಾಡುವ ಜಾಗದಲ್ಲಿ ಇಂದು ಮೂರೂ ಗಂಟೆ ಪ್ರಯಾಣ ಮಾಡುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಇದೆಯೋ ಇಲಾವೋ ಎಂದು ತಿಳಿಯುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೊಂಡಾ ಮುಚ್ಚುವ ಕೆಲಸವನ್ನು ಮಾಡಿ ಎಂದರು.
ಸಾಮಾಜಿಕ ಮುಖಂಡ ರಾಮು ಕಿಣಿ ಮಾತನಾಡಿ, ಪ್ರತಿಯೊಬ್ಬರಿಗೂ ಸಂಪರ್ಕದ ಕೊಂಡಿ ಎಂದರೆ ಅದು ರಸ್ತೆ. ಕಳೆದ 2 ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹೊಂಡಮಯವಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜುಗಳಿಗೆ ಹೋಗಲು ಹಾಗೂ ಅನಾರೋಗ್ಯದಿಂದ ಬೇರೆ ಊರಿಗೆ ಹೋಗುವಾಗ ದಾರಿಮಧ್ಯದಲ್ಲಿಯೇ ಪ್ರಾಣಕಳೆದುಕೊಂಡಿದ್ದಾರೆ. ರಸ್ತೆ ಸಮಸ್ಯೆಯನ್ನು ಆದಷ್ಟು ಬೇಗ ಸರಿ ಪಡಿಸಿ, ಇದರಿಂದ ಸಾರ್ವಜನಿಕರಿಗೆ ಅನುಕೂಲಕರವಾಗಿದೆ. ಇದರಿಂದ ನಮಗೆ ನಿಮಗೆ ಆಸ್ಥೆ ಅಲ್ಲದೆ ದೇಶದ ಅಭಿವೃದ್ಧಿಗೆ ಸಾಧ್ಯವಾಗಲಿದೆ ಎಂದರು.
ಹುತ್ಗಾರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೋಭಾ ನಾಯ್ಕ ಮಾತನಾಡಿ, ಮಹಿಳೆಯರೆಲ್ಲಾ ಕುಳಿತು ಮೊಬೈಲ್ ನೋಡಿ ಅದರಲ್ಲಿ ಬರುವ ಸುದ್ದಿಗಳನ್ನು ಚರ್ಚೆ ಮಾಡುವ ಬದಲು, ಇಂತಹ ಹೋರಾಟಕ್ಕೆ ಬೆಂಬಲ ನೀಡಿ. ಅದನ್ನು ಬಿಟ್ಟು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನುವ ಮನೋಭಾವನೆ ಬಿಟ್ಟಾಗ ಮಾತ್ರ ಆಗ ಮಾತ್ರ ಶಿರಸಿಯಲ್ಲಿ ಎಲ್ಲಾ ಕೆಲಸವನ್ನು ಮಾಡಲು ಸಾಧ್ಯ. ಯಾವುದೇ ಹೋರಾಟ ನಡೆದರೂ ಅಲ್ಲಿ ಹಳ್ಳಿ ಜನ ಇರುತ್ತಾರೆ. ಆದರೆ ನಗರದ ಜನಕ್ಕೆ ಏನಾಗಿದೆ? ನೀವು ಸುಮ್ಮನೆ ಶಾಂತವಾಗಿರುವುದನ್ನು ಬಿಟ್ಟು ಒಳ್ಳೆ ಕೆಲಸಕ್ಕೆ ಬೆಂಬಲ ನೀಡಿ ಎಂದರು.
ಹಿರಿಯ ಹೋರಾಟಗಾರ ಜಯಶೀಲ ಗೌಡರ್ ಮಾತನಾಡಿ, ಗ್ರಾಮ ಪಂಚಾಯತನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗಟಾರದ ನಿರ್ವಹಣೆಯಾಗಿಲ್ಲ. ಜಾಡು ಬೆಳೆದಿದೆ. ಮೂಲಭೂತವಾಗಿ ನಡೆಯಬೇಕಾದ ರಸ್ತೆ ಕಾಮಗಾರಿ ಸರಿಯಾಗಿ ಆಗದೆ ಇಂದು ಹೊಂಡ- ಗುಂಡಿಗಳಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ವರ್ಷ ಮುಂಗಾರು ಮೊದಲೇ ಪ್ರಾರಂಭವಾಗಿದ್ದರಿಂದ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಾಣ ಕಿವುಡುತನ ಪ್ರದರ್ಶನ ಮಾಡುತ್ತಿದೆ. ಇದರಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಇದನ್ನೆಲ್ಲಾ ಯಾರು ಮಾಡಬೇಕು? ಸಂಕಷ್ಟದಲ್ಲಿರುವವರಿಗೆ ನೆರವಾಗದೆ ಇಂದು ಸರ್ಕಾರ ಕಣ್ಣುಮುಚ್ಚಿಕೊಂಡು ಕುಳಿತಿದೆ ಎಂದರು.
ಯುವ ಮುಖಂಡ ಮಂಜುನಾಥ ಪಾಟೀಲ್ ದಾಸನಕೊಪ್ಪ ಮಾತನಾಡಿ ರಾಜ್ಯದಲ್ಲಿ ಇಂದು ಹಿಂದೆಂದೂ ಕೇಳರಿಯದ ಅಂದ ಸರ್ಕಾರ ಇದೆ. ಅತ್ಯಂತ ಕಷ್ಟದಲ್ಲಿರುವ ಬಡವರು ತಮ್ಮ ಮನೆ ಸೋರುತ್ತಿದ್ದರೆ ಅದನ್ನ ತಡೆಯಲು ತಾಡಪಲ್ ಹಾಕುವುದನ್ನ ನೋಡಿದ್ದೇವೆ. ಆದರ, ಶಿರಸಿಯಲ್ಲಿ ಬಸ್ ಗಳಿಗೆ ತಾಡಪಲ್ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲಷ್ಟೇ ಶಿರಸಿ ಸುತ್ತಮುತ್ತಲಿನ ಎಲ್ಲಾ ಭಾಗದ ರಸ್ತೆಗಳು ಇಂದು ಓಡಾಡದೇ ಇರುವ ಹಾಗೆ ಆಗಿದೆ. ಹೊಂಡಗಳೆಲ್ಲಾ ನಿರ್ಮಾಣವಾಗಿ, ಅದರಿಂದಾಗಿದಾಗಿ ಅದೆಷ್ಟೋ ಜನ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇದನ್ನೆಲಾ ಸರಿಪಡಿಸಬೇಕಾದ ರಾಜ್ಯ ಸರ್ಕಾರ ಇಂದು ಏನು ಅರಿಯದ ಸ್ಥಿತಿಯಲ್ಲಿದೆ. ಶಾಸಕರೇ ನಿಮ್ಮ ಜೊತೆ ನಾವಿದ್ದೇವೆ. ಬನ್ನಿ ವಿಧಾಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರದ ಕಣ್ತೆರೆಸಬೇಕು, ನಿಮ್ಮ ಜೊತೆ ನಾವಿದ್ದೇವೆ ಹೋರಾಟಕ್ಕೆ ಬನ್ನಿ ಎಂದರು.
ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ, ಪ್ರತಿಭಟನಾಕಾರರೊಡನೆ ತಾಯಿ ಶ್ರೀ ಮಾರಿಕಾಂಬಾ ಸನ್ನಿಧಿಯಲ್ಲಿ, ಕ್ಷೇತ್ರದ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ಪ್ರಾರ್ಥನೆ ನಡೆಸಿ, ವಿಶೇಷ ಪೂಜೆ ನೆರವೇರಿಸಲಾಯಿತು. ನಂತರದಲ್ಲಿ ನಗರದ ಶಿವಾಜಿ ಛಕದಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಪುತ್ಥಳಿಗೆ ಹಾಗು ಮಾರುಕಟ್ಟೆ ಆವಾರದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಪಟ್ಟರಾಜ ಗೌಡ ಮಾತನಾಡಿ, ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ನಿಮ್ಮ ಮನವಿಯನ್ನು ಸ್ವೀಕರಿಸಿದ್ದೇನೆ. ಈ ಕೂಡಲೇ ಸಹಾಯಕ ಆಯುಕ್ತರೊಂದಿಗೆ ಮಾತನಾಡಿ, ಅವರ ನಿರ್ದೇಶನದ ಮೇರೆಗೆ ಸಾಧ್ಯವಾದಷ್ಟು ಬೇಗನೆ ಅಧಿಕಾರಿಗಳು ಹಾಗು ಸಾರ್ವಜನಿಕರ ಸಮನ್ವಯ ಸಭೆಯನ್ನು ನಡೆಸಲಾಗುವುದು ಎಂದರು.
ಶಾಸಕರಾಗಿ ಎರಡು ವರ್ಷವಾದರೂ ಸಹ ಭೀಮಣ್ಣನವರಿಗೆ ಶಾಸಕತ್ವದ ಜವಾಬ್ದಾರಿ ಇನ್ನೂ ಬಂದಿಲ್ಲ. ಜಿಲ್ಲೆಯಲ್ಲಿ 40 ವರ್ಷಗಳ ಕಾಲ ಆಡಳಿತ ನಡೆಸಿರುವ ದೇಶಪಾಂಡೆಯವರು ಒಂದು ವಾರಗಳ ಕಾಲ ಶಾಸಕ ಭೀಮಣ್ಣನವರ ಜೊತೆಗಿದ್ದು, ಅವರಿಗೆ ಆಡಳಿತ ನಡೆಸುವ ವಿಧಾನ, ಶಾಸಕತ್ವದ ಜವಾಬ್ದಾರಿ, ಕೆಡಿಪಿ ಸಭೆ, ಅಧಿಕಾರಿಗಳ ಸಭೆಗಳನ್ನು ಹೇಗೆ ನಡೆಸಬೇಕೆಂದು ಮಾರ್ಗದರ್ಶನ ಮಾಡಲಿ ಎಂದು ಬಿಜೆಪಿ ಮುಖಂಡ ಆನಂತಮೂರ್ತಿ
ಹೆಗಡೆ ತಿಳಿಸಿದರು.
ಪಾದಯಾತ್ರೆಯಲ್ಲಿ ಪ್ರಮುಖರಾದ ಅನಿಲ ಕರಿ, ಚಂದ್ರಕಾಂತ ಹೆಗಡೆ ಕೊಳಗಿಬೀಸ್, ರವಿ ಹೆಗಡೆ ಹಳದೋಟ, ಪವಿತ್ರ ಹೊಸುರು, ಅನಸೂಯಾ ಕಡಬಾಳ, ಜಿ.ವಿ.ಹೆಗಡೆ ಓಣಿಕೇರಿ, ಪ್ರಭಾವತಿ ಗೌಡ, ದೀಪಾ ನಾಯ್ಕ, ರಾಮು ಕಿಣಿ, ವಿ.ಎಂ.ಹೆಗಡೆ ಕಬ್ಬೆ, ನಾಗೇಂದ್ರ ತೆಪ್ಪಾರ್, ವಿಶ್ವನಾಥ ಬನವಾಸಿ, ಸಂತೋಷ ಗೌಡರ್, ಆದರ್ಶ ಪೈ, ಗಿರೀಶ ಸೋವಿನಕೊಪ್ಪ, ನಿರ್ಮಲಾ ಶೆಟ್ಟಿ ರಾಜು ಹೆಗಡೆ ಸೇರಿದಂತೆ ಕ್ಕೂ ನೂರಾರು ಉಪಸ್ಥಿತರಿದ್ದರು

