ಮುರುಡೇಶ್ವರ (ನವೆಂಬರ್ 10):
ಮುರುಡೇಶ್ವರ ತಾಲೂಕಿನ ಬೈಲೂರು ಗ್ರಾಮ ಸಮೀಪದ ತೆಂಗಾರ ಪ್ರದೇಶದಲ್ಲಿ ಎರಡು ದೇವಾಲಯಗಳಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಲಕ್ಷ್ಮೀನಾರಾಯಣ ದೇವಾಲಯ ಹಾಗೂ ಉಡುಪಿ ಗೋಪಾಲಕೃಷ್ಣ ದೇಗುಲಗಳಲ್ಲಿ ಶನಿವಾರ ರಾತ್ರಿ ಕಳ್ಳರು ನುಗ್ಗಿದ್ದಾರೆ ಎಂದು ಮಾಹಿತಿ ದೊರೆತಿದೆ.
ಸ್ಥಳೀಯರು ಹೇಳುವ ಪ್ರಕಾರ, ನವೆಂಬರ್ 9ರ ರಾತ್ರಿ ವೇಳೆ ದೇವಾಲಯದ ಹಿಂಭಾಗದ ಗೋಡೆ ಹಾರಿ ಒಳನುಗ್ಗಿದ ಕಳ್ಳರು, ಬಾಗಿಲು ಮುರಿದು ದೇವಾಲಯದ ಒಳಗೆ ಪ್ರವೇಶಿಸಿದ್ದಾರೆ. ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಇದ್ದ ಪಂಚಲೋಹದ ಮೂರ್ತಿಯನ್ನು ಕಳ್ಳರು ಕದ್ದೊಯ್ದಿದ್ದು, ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನೂ ದೋಚಿದ್ದಾರೆ.
ಹಣದ ಕಾಣಿಕೆ ಡಬ್ಬಿಯನ್ನು ಒಡೆದು, ಅದರಲ್ಲಿದ್ದ ಸುಮಾರು ₹27,000 ನಗದನ್ನೂ ತೆಗೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಅದೇ ರಾತ್ರಿ ಸಮೀಪದಲ್ಲಿರುವ ಉಡುಪಿ ಗೋಪಾಲಕೃಷ್ಣ ದೇಗುಲಕ್ಕೂ ಕಳ್ಳರು ನುಗ್ಗಿ, ಅಲ್ಲಿ ದೇವರ ಬೆಳ್ಳಿಯ ಕಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಕದ್ದಿದ್ದಾರೆ. ಅಲ್ಲಿಯೂ ಕಾಣಿಕೆ ಡಬ್ಬಿಯನ್ನು ಖಾಲಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದೆ.

