ಮಾಜಿ ಶಾಸಕ ಸುನೀಲ ನಾಯ್ಕ. ಇವರು ನೀಡಿದ ಸುಳ್ಳು ಭರವಸೆಗಳು, ಸುಳ್ಳಾರೋಪಗಳಿಂದಾಗಿಯೇ ಕ್ಷೇತ್ರದ ಮತದಾರರ ಇವರನ್ನು ಮನೆಯಲ್ಲಿ ಕೂರುವಂತೆ ಮಾಡಿದ್ದಾರೆ- ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ವೆಂಕಟೇಶ್ ನಾಯ್ಕ
ಭಟ್ಕಳ:ಜಿಲ್ಲಾ ಉಸ್ತುವಾರಿ ಸಚಿವರು ಕಚೇರಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದಾರೆಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ. ಇವರು ನೀಡಿದ ಸುಳ್ಳು ಭರವಸೆಗಳು, ಸುಳ್ಳಾರೋಪಗಳಿಂದಾಗಿಯೇ ಕ್ಷೇತ್ರದ ಮತದಾರರ ಇವರನ್ನು ಮನೆಯಲ್ಲಿ ಕೂಡುವಂತೆ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ಭಟ್ಕಳಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸಂಜೆ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಮಾಜಿ ಶಾಸಕರು ಸಚಿವರ ಬಗ್ಗೆ ತಪ್ಪು ಅಭಿಪ್ರಾಯ ಬರುವ ಹೇಳಿಕೆ ನೀಡಿದ್ದಾರೆ. ಸಚಿವರು ಜನತೆಯ ಅನುಕೂಲಕ್ಕಾಗಿ ಸಹಾಯಕ ಆಯುಕ್ತರ ಹಳೇ ಕಚೇರಿಯನ್ನು ನವೀಕರಣ ಮಾಡಿಸಿ ತಮ್ಮ ಕಚೇರಿಯನ್ನಾಗಿ ಮಾಡಿದ್ದಾರೆ. ಮಾಜಿ ಶಾಸಕರು ಹೇಳಿದಂತೆ ಕಚೇರಿ ನವೀಕರಣದಲ್ಲಿ ಆಡಂಬರವೂ ಮಾಡಿಲ್ಲ, ಕೋಟ್ಯಾಂತರ ರೂಪಾಯಿ ಖರ್ಚೂ ಮಾಡಿಲ್ಲ. ಸಚಿವರ ಕಚೇರಿ ನವೀಕರಣದ ಬಗ್ಗೆ ನಿಖರವಾದ ಮಾಹಿತಿ ಬೇಕಾದಲ್ಲಿ ಮಾಜಿ ಶಾಸಕರು ಲೋಕೋಪಯೋಗಿ ಇಲಾಖೆಗೆ ಹೋಗಿ ಪಡೆಯಲಿ ಎಂದರು. ಸುನೀಲ ನಾಯ್ಕ ಅವರು ಶಾಸಕರಿದ್ದ ಸಂದರ್ಭದಲ್ಲಿ ಆರಂಭದ 1 ವರ್ಷ ಮಾತ್ರ ತಾಪಂ ಕಟ್ಟಡದಲ್ಲಿ ಕಚೇರಿ ಇದ್ದಿದ್ದನ್ನು ಹೊರತುಪಡಿಸಿ ನಂತರ ಒಂದು ದಿನವೂ ತಾಲ್ಲೂಕು ಆಡಳಿತ ಕಟ್ಟಡದಲ್ಲಿರುವ ಕಚೇರಿಗೆ ಆಗಮಿಸಿಲ್ಲ. ಇವರ ಕಚೇರಿಯಲ್ಲಿದ್ದ ಖುರ್ಚಿ, ಟೇಬಲ್ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.
ಇವರ ಅಧಿಕಾರದ ಅವಧಿಯಲ್ಲಿ ಆಪ್ತ ಸಹಾಯಕರೂ ಕಚೇರಿಯಲ್ಲಿ ಇರಲಿಲ್ಲ. ಇದೀಗ ಸಚಿವರು ಜನರ ಅನುಕೂಲಕ್ಕಾಗಿ ಮಾಡಿದ ಸುಸಜ್ಜಿತ ಕಚೇರಿ ಮಾಡಿದರೆ ಮಾಜಿ ಶಾಸಕರು ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಚಿವರು ಮುಖ್ಯಮಂತ್ರಿ ಪರಿಹಾರದಡಿಯಲ್ಲಿ ಅನಾರೋಗ್ಯ ಪೀಡಿತರಿಗೆ ಹಣ ಮಂಜೂರಿಸಿಕೊಂಡು ಬಂದಿಲ್ಲ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಒಂದೂ ಗುದ್ದಲಿ ಪೂಜೆ ನಡೆದಿಲ್ಲ ಎಂದು ಮಾಜಿ ಶಾಸಕರು ಆರೋಪಿಸಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಸಚಿವರು ಮುಖ್ಯಮಂತ್ರಿ ಪರಿಹಾರನಿಧಿಯಡಿಯಲ್ಲಿ ಈಗಾಗಲೇ 28.17 ಲಕ್ಷ ರೂಪಾಯಿ ಮಂಜೂರಿ ಮಾಡಿಕೊಂಡು ಬಂದಿದ್ದಾರೆ. ಸಚಿವರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ಮಾಜಿ ಶಾಸಕರಂತೆ ಹಿಂದಿನ ಸಿದ್ಧರಾಮಯ್ಯ ಸರಕಾರದಲ್ಲಿ ಮಂಕಾಳ ವೈದ್ಯರು ಮಂಜೂರಿಸಿಕೊಂಡು ಬಂದ ಅಭಿವೃದ್ಧಿಕಾರ್ಯಗಳನ್ನು ಉದ್ಘಾಟಿಸಲು ಕಾರಿನಲ್ಲಿ ಗುದ್ದಲಿ, ಹಾರೆ ಇಟ್ಟುಕೊಂಡು ತಿರುಗಿಲ್ಲ ಎಂದ ಅವರು ಮಾಜಿ ಶಾಸಕರು ತಮ್ಮ ಅಧಿಕಾರದ ಅವಧಿಯಲ್ಲಿ ಏನೇನು ಮಾಡಿದ್ದಾರೆಂದು ಒಮ್ಮೆ ಅವಲೋಕನ ಮಾಡಿಕೊಳ್ಳಲಿ. ಇವರು ಸುಳ್ಳು ಹೇಳಿದ್ದರಿಂದಲೇ ಜನತೆ ಇವರನ್ನು ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಮಾಜಿ ಶಾಸಕರು ಇನ್ನಾದರೂ ತಮ್ಮ ನಡವಳಿಕೆಯನ್ನು ಸರಿ ಮಾಡಿಕೊಳ್ಳಲಿ. ಸುಳ್ಳು ಹೇಳುವುದನ್ನು ಬಿಡಲಿ. ಸಚಿವರ ಕಚೇರಿಗೆ ಅವರೂ ಬಂದು ಬೇಕಾದರೆ ತಮ್ಮ ಕೆಲಸ ಏನಿದ್ದರೂ ಮಾಡಿಕೊಳ್ಳಲಿ. ಕ್ಷೇತ್ರದ ಜನರು ಮಂಕಾಳ ವೈದ್ಯರನ್ನು 33 ಸಾವಿರ ಅಂತರದಿಂದ ಗೆಲ್ಲಿಸಿದ್ದಾರೆ. ಸಚಿವರಾಗಿರುವ ಮಂಕಾಳ ವೈದ್ಯರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಮಾಜಿ ಶಾಸಕ ಸುನೀಲ ನಾಯ್ಕ ಅಭಿವೃದ್ಧಿಗೆ ಸಹಕರಿಸುವ ಕೆಲಸ ಮಾಡಲಿ ಎಂದು ಹೇಳಿದರು.
ಪ್ರಮುಖರಾದ ಗೋಪಾಲ ನಾಯ್ಕ, ಜಿ.ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಎಸ್ ಎಂ ಪರ್ವೇಜ್ ಮಾತನಾಡಿದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ನಯನಾ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ತಾ.ಪಂ. ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ವಿಷ್ಣು ದೇವಾಡಿಗ, ನಾರಾಯಣ ನಾಯ್ಕ, ದೇವಿದಾಸ ಆಚಾರಿ ಮುಂತಾದವರಿದ್ದರು.