ಮದುವೆಗೂ ಮುನ್ನ ಲವ್, ಮದುವೆ ಬಳಿಕವೂ ಲವ್ – ವಿಡಿಯೋ ಬಿಡುಗಡೆ ಮಾಡಿದ ನಾಪತ್ತೆಯಾಗಿದ್ದ
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಐನೆಕಿದು ಗ್ರಾಮದ ಭಾರತಿ ಮೂಕಮಲೆ ಕಾಣೆಯಾಗಿ ಸುಮಾರು 25 ದಿನಗಳ ಬಳಿಕ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ವಿಡಿಯೋ ದಲ್ಲಿ ಮಾತನಾಡಿರುವ ಭಾರತಿ, ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ, ನಾನು ನಾನಾಗಿಯೇ ಬಂದಿದ್ದೇನೆ. ನಾನು ಕಳೆದ ಐದು ವರ್ಷಗಳಿಂದ ಒಬ್ಬರನ್ನು ಪ್ರೀತಿಸುತ್ತಿದ್ದು ಅವರನ್ನು ನಾನೇ ಬರಲು ಹೇಳಿದೆ. ಅವರೇ ಬಂದು ನನ್ನನ್ನು ಕರೆದು ಕೊಂಡು ಹೋಗಿದ್ದಾರೆ. ನಾನು ಅವರನ್ನು ಮದುವೆಗೂ ಮುಂಚೆಯೂ ಪ್ರೀತಿಸುತ್ತಿದ್ದೆ, ಈಗಲೂ ಪ್ರೀತಿ ಮಾಡುತ್ತಿದ್ದೇನೆ ನಾವಿಬ್ಬರು ಸಂತೋಷದಿಂದ ಇದ್ದೇವೆ.
ದಯವಿಟ್ಟು ನಮಗೆ ಕಾಲ್ ಮಾಡುವುದಾಗಲಿ, ನಮ್ಮನ್ನು ಟ್ರೇಸ್ ಮಾಡಿ ಹುಡುಕುವ ಪ್ರಯತ್ನ ಮಾಡಬೇಡಿ. ನಮಗೆ ತೊಂದರೆ ಕೊಟ್ಟರೆ ಯಾರು ನಮಗೆ ತೊಂದರೆ ಕೊಡುತ್ತಾರೋ ಅವರ ಹೆಸರನ್ನು ಬರೆದಿಟ್ಟು ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ದಲ್ಲಿ ಹೇಳಿಕೊಂಡಿದ್ದಾರೆ.
ಘಟನೆಯ ವಿವರ :
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಐನೆಕಿದು ಗ್ರಾಮದ ಭಾರತಿ ಮೂಕಮಲೆ 25 ದಿನಗಳ ಹಿಂದೆ ತಮ್ಮ ನಿವಾಸದಿಂದ ಕಾಣೆಯಾಗಿದ್ದರು. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಹಾಗೂ ಸದಸ್ಯರು ಸೇರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಶೀಘ್ರ ಪತ್ತೆಗೆ ಮನವಿ ಮಾಡಿದ್ದರು.
ಭಾರತಿ ಅವರು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವ ದೂರದ ಸಂಬಂಧಿ ಜೊತೆ ಹೋಗಿರುವುದಾಗಿ ಹೇಳಲಾಗಿತ್ತು. ಅ. 29 ರಂದು ಸಂಜೆ ಆಕೆಯ ಮನೆ ಬಳಿಗೆ ಕಾರಿನಲ್ಲಿ ಒಬ್ಬರು ಬಂದಿದ್ದರು ಎಂಬ ಸುದ್ದಿಯೂ ಹರಡಿತ್ತು.ಕಾರು ಬಂದು ತೆರಳಿರುವುದು ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಕಾರಿನಲ್ಲಿ ತೆರಳಿದವರು ಬೆಂಗಳೂರಿಗೆ ತಲುಪಿರುವುದು ಪೊಲೀಸರ ಪರಿಶೀಲನೆ ವೇಳೆ ಗೊತ್ತಾಗಿತ್ತು. ಅಲ್ಲದೆ ಆಂಧ್ರ ಪ್ರದೇಶಕ್ಕೂ ಹೋಗಿರುವ ಮಾಹಿತಿ ಲಭ್ಯವಾಗಿತ್ತು.
ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯ ಎಸ್ ಐ ಖುದ್ದು ಬೆಂಗಳೂರಿಗೆ ತೆರಳಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದರು. ಈ ನಡುವೆ ಕಾಣೆಯಾದ ಗ್ರಾ.ಪಂ ಸದಸ್ಯೆಯನ್ನು ಪತ್ತೆ ಹಚ್ಚುವಂತೆ ಗ್ರಾ.ಪಂ ವತಿಯಿಂದ ಸುಬ್ರಹ್ಮಣ್ಯ ಠಾಣೆಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಸ್ವತಃ ಕಾಣೆಯಾದ ಭಾರತಿ ಯವರೇ ವಿಡಿಯೋ ಮಾಡಿ ಈ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ.