ಲವ್ ಜಿಹಾದ್ ಆರೋಪ- ಸ್ವತಃ ತಾನೇ ಪೊಲೀಸ್ ಠಾಣೆಮೆಟ್ಟಿಲೇರಿದ ಯುವತಿ
ಕೊಪ್ಪ- ಕಳೆದ ಮೂರು ದಿನಗಳ ಹಿಂದಷ್ಟೇ ಕಾಫೀನಾಡಲ್ಲಿ ಸದ್ದು ಮಾಡಿದ್ದ ಕೊಪ್ಪ ಮೂಲದ ಲವ್ ಜಿಹಾದ್ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸ್ವತಃ ಯುವತಿಯೇ ಆರೋಪಿ ಮೊಹಮ್ಮದ್ ರೋಫ್ ವಿರುದ್ಧ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾಳೆ. ರೋಫ್ ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಆತನಿಗೆ ಶಿಕ್ಷೆ ವಿಧಿಸಬೇಕೆಂದು ಯುವತಿ ಗಂಭೀರವಾಗಿ ದೂರಿದ್ದಾಳೆ.
ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ತೃತೀಯ ವರ್ಷದ ಡಿಗ್ರಿ ಓದುತಿರುವ ವಿದ್ಯಾರ್ಥಿನಿಗೆ ಕಳೆದೆರೆಡು ವರ್ಷದ ಹಿಂದೆ ಇನ್ಸ್ಟಾಗ್ರಾಂ ನಲ್ಲಿ ರೋಫ್ ನ ಪರಿಚಯವಾಗಿದೆ ಎನ್ನಲಾಗಿದ್ದು, ತನ್ನೊಟ್ಟಿಗೆ ಯುವತಿ ಸಲುಗೆಯಿಂದ ತೆಗೆಸಿಕೊಂಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ರೋಫ್ ವೈರಲ್ ಮಾಡಿ ಹಿಂಸೆ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.
ದೂರು ಕೊಟ್ರೂ ಕ್ರಮ ಕೈಗೊಳ್ತಿಲ್ಲ, ಸೆನ್ ಪೊಲೀಸ್ ವಿರುದ್ಧ ಎಸ್ಪಿಗೆ ದೂರು:
ಈ ಕುರಿತು ಆಕೆಯ ಅಣ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿ 20 ದಿನವಾದ್ರೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳೋಕೆ ಸೆನ್ ಠಾಣೆಯ ಇನ್ಸ್ಪೆಕ್ಟರ್ ನಾಸೀರ್ ಹುಸೇನ್ ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿಯ ಸಹೋದರ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ದಾರೆ. ಇಷ್ಟೆಲ್ಲ ಆದ ಬಳಿಕ ಈಗ ಸ್ವತಃ ಯುವತಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಆರೋಪಿಗೆ ಶಿಕ್ಷೆ ನೀಡಬೇಕೆಂದು ಕೋರಿದ್ದಾರೆ.
ಇನ್ಸ್ಪೆಕ್ಟರ್ ಅಮಾನತಿಗೆ ಆಗ್ರಹ, ನಾಳೆ ಕೊಪ್ಪದಲ್ಲಿ ಪ್ರತಿಭಟನೆ:
ರೋಫ್ ಹಾಗೂ ಆತನ ಗೆಳೆಯರಾದ ಇರ್ಫಾನ್, ಸೈಫ್ ನನಗೆ ಚಾಕು ತೋರಿಸಿ ಬೆದರಿಸಿ ಅಮಲು ಬರುವ ಜ್ಯೂಸ್ ನೀಡಿ ಫೋಟೋ ಹಾಗು ವೀಡಿಯೋ ಮಾಡಿಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಯುವತಿ ದೂರಿದ್ದು. ಇನ್ನು ದೂರು ದಾಖಲಾಗ್ತಿದ್ದಂತೆ ಲವ್ ಜಿಹಾದ್ ಆರೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುಬೈನಲ್ಲಿರೋ ಆರೋಪಿ ಮೊಹಮ್ಮದ್ ರೋಫ್ ನನ್ನು ಬಂಧಿಸುವಂತೆ ಕೊಪ್ಪದ ಬಜರಂಗದಳ ಘಟಕ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದು ನಾಳೆ ಕೊಪ್ಪದ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆಗೆ ಕರೆ ನೀಡಿದೆ. ಮುಖ್ಯವಾಗಿ ಸೆನ್ ಇನ್ಸ್ಪೆಕ್ಟರ್ ನಾಸೀರ್ ಹುಸೇನ್ ರನ್ನು ಅಮಾನತು ಮಾಡಬೇಕು ಹಾಗೂ ಲವ್ ಜಿಹಾದ್ ರೂಪದಲ್ಲಿ ಹಿಂದೂ ಯುವತಿಯರಿಗೆ ಮಾನಸಿಕ ಹಿಂಸೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುಬೇಕೆಂದು ಆಗ್ರಹಿಸಿದೆ.