ಮೈಸೂರು- ಮೈಸೂರಿನಲ್ಲಿ ಮಹಿಳಾ ಪೇದೆಯೊಬ್ಬರು ನೇಣಿಗೆ ಶರಣಾದ ಘಟನೆ ಇಂದು ನಡೆದಿದೆ. ಮೈಸೂರಿನ ಕೆ.ಎಸ್.ಆರ್.ಪಿ.ಕ್ವಾರ್ಟರ್ಸ್ ನಲ್ಲಿ ಮಹಿಳಾ ಪೇದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೀತಾ (32) ಮೃತ ಮಹಿಳಾ ಪೋಲಿಸ್ ಪೇದೆಯಾಗಿದ್ದಾರೆ. ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಗೀತಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಸುಮಾರು 12 ಗಂಟೆ ವೇಳೆಗೆ ಅನಾರೋಗ್ಯದ ಕಾರಣ ನೀಡಿ ಮನೆಗೆ ಹೋಗಿದ್ದರು.
ಆ ವೇಳೆ ಪತಿ ಕೂಡ ಮನೆಯಲ್ಲೆ ಇದ್ದರು. ಎಟಿಎಂ ನಲ್ಲಿ ಹಣ ಡ್ರಾ ಮಾಡಿ ತರುವಂತೆ ಪತಿಯನ್ನು ಹೊರಗೆ ಕಳುಹಿಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ಆ ಸಂದರ್ಭ ನೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎಟಿಎಂನಲ್ಲಿದ್ದ ಪತಿ ಹಣ ಡ್ರಾ ಮಾಡಲು OTP ಗಾಗಿ ಪತಿ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ. ನಂತರ ಮನೆಗೆ ಬಂದ ಪತಿಗೆ ಗೀತಾ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಗೀತಾಗೆ ಒಂದು ಮಗು ಇದೆ.