*ಸುರತ್ಕಲ್ ಅಕ್ರಮ ಟೋಲ್ ಸಂಗ್ರಹ ತೆರವಿಗೆ ಆಗ್ರಹಿಸಿ ಬೃಹತ್ ಕಾಲ್ನಡಿಗೆ ಜಾಥ
ಅಕ್ರಮ ಟೋಲ್ ತೆರವು ಆಗ್ರಹಿಸಿ, ಹಗಲು ರಾತ್ರಿ ಧರಣಿಗೆ ಬೆಂಬಲಿಸಿ, ಜಿಲ್ಲೆಯ ಸರ್ವ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಶುಕ್ರವಾರ ಶಾಂತಿಯುತ ಪ್ರಜಾಸತ್ತಾತ್ಮಕ ಬೃಹತ್ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಅಕ್ರಮ ಟೋಲ್ ವಿರುದ್ಧದ ಪ್ರತಿಭಟನೆ ತೀವ್ರ ರೂಪ ಪಡೆಯಿತು.
ಅಕ್ರಮ ಟೋಲ್ ಸಂಗ್ರಹ ವಿರೋಧಿಸಿ ಕಳೆದ 22 ದಿನಗಳಿಂದ
ಟೋಲ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ, ಸಮಾನ ಮನಸ್ಕ ಸಂಘಟನೆಗಳು ನಡೆಸುತ್ತಿರುವ ಹಗಲು-ರಾತ್ರಿ ಮುಷ್ಕರ ಮುಂದುವರಿದಿದೆ. ಕೇಂದ್ರ ಹೆದ್ದಾರಿ ಸಚಿವಾಲಯದ ಆದೇಶದ ಮೇರೆಗೆ ಸುರತ್ಕಲ್ ಟೋಲ್ ಸಂಗ್ರಹವನ್ನು ರದ್ದುಗೊಳಿಸಿದ ಕುರಿತು ಕಳೆದ ನವಂಬರ್ 14ರಂದು ಜಿಲ್ಲೆಯ ಮಾನ್ಯ ಸಂಸದರು ಟ್ವಿಟರ್ ಮೂಲಕ ಅಧಿಕೃತ ಮಾಹಿತಿ ನೀಡಿದ್ದರು, ಆದರೆ ಅಕ್ರಮ ಟೋಲ್ ಸಂಗ್ರಹ ಯಥಾಸ್ಥಿತಿ ಮುಂದುವರಿದಿದೆ. ಟೋಲ್ ಸಂಗ್ರಹ ರದ್ದುಗೊಳ್ಳುವ ವರೆಗೂ ವಿರಮಿಸದೆ ಪ್ರತಿಭಟನೆಗಳು ಇನ್ನಷ್ಟು ತೀವ್ರ ಗೊಳಿಸುವ ನಿಟ್ಟಿನಲ್ಲಿ ಪ್ರತಿಭಟನೆಗಳು ಮುಂದುವರಿಯಲಿದೆ ಎಂದು ಹೋರಾಟಗಾರರು ಎಚ್ಚರಿಸಿದರು.
ಅಕ್ರಮ ಟೋಲ್ ಸಂಗ್ರಹ ಹೋರಾಟಕ್ಕೆ ಬೆಂಬಲಿಸಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾ ಶುಕ್ರವಾರ ರಾಷ್ಟ್ರೀಯ ಹೆದ್ದಾರಿಯ ತಡಂಬೈಲ್ ಜಂಕ್ಷನ್ ನಿಂದ ಕಾಲ್ನಡಿಗೆ ಜಾಥಾ ಪ್ರಾರಂಭಿಸಿದ ಪ್ರತಿಭಟನಾಕಾರರು, ಕೇಂದ್ರ ಸರಕಾರ ಮತ್ತು ಹೆದ್ದಾರಿ ಪ್ರಾಧಿಕಾರದ ಹಠಮಾರಿ ನಿಲುವು ಮತ್ತು ಜನ ವಿರೋಧಿ ಟೋಲ್ ಸಂಗ್ರಹ ಲೂಟಿ ನೀತಿ ವಿರೋಧಿಸಿ ಘೋಷಣೆಗಳನ್ನು ಕೂಗುತ್ತಾ, ಧರಣಿ ಸ್ಥಳದವರೆಗೆ ಕಾಲ್ನಡಿಗೆಯಲ್ಲಿಯೇ ತಲುಪಿ, ಬಳಿಕ ವೇದಿಕೆಯಲ್ಲಿ ಸಭೆ ನಡೆಸಿ ಪ್ರತಿಭಟಿಸಿದರು.
ಮಾಜಿ ಸಚಿವರಾದ ರಮನಾಥ ರೈ, ಅಭಯ್ ಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪ್ರತಿಭಾ ಕುಳಾಯಿ ಸೇರಿದಂತೆ ಪ್ರಮುಖರು, ಹೋರಾಟಕ್ಕೆ ಬೆಂಬಲ ನೀಡುತ್ತಾ ಪ್ರತಿಭಟಿಸಿ ಮಾತನಾಡಿ, ಅಕ್ರಮ ಟೋಲ್ ಸಂಗ್ರಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರು, ಕೆಲವು ಪಕ್ಷದ ಮುಖಂಡರುಗಳು ಸೇರಿದಂತೆ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆಗೆ ಸಾತ್ ನೀಡಿದರು.
ವರದಿ: ಅದ್ದಿ ಬೊಳ್ಳೂರು