ಮೀನುಗಾರಿಕಾ ರೈತ ಉತ್ಪಾದಕ ಕಂಪನಿಗಳಿಗೆ ಒಂದುದಿನದ ವ್ಯಾಪಾರಾಭಿವೃದ್ಧಿ ಹಾಗೂ ಮಾರುಕಟ್ಡೆ ಸಂಪರ್ಕ ಕಾರ್ಯಾಗಾರ ಸಂಪನ್ನ.
ಭಟ್ಕಳ: ಕರ್ನಾಟಕ ಸರ್ಕಾರ, ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಬೆಂಗಳೂರು ಹಾಗೂ ಸ್ಕೊಡವೇಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಉಕ,ಉಡುಪಿ ಮತ್ತು ಹಾವೇರಿ ಜಿಲ್ಲೆಗಳ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಗಳಿಗೆ ಒಂದುದಿನದ ವ್ಯಾಪಾರಾಭಿವೃದ್ಧಿ ಹಾಗೂ ಮಾರುಕಟ್ಡೆ ಸಂಪರ್ಕ ಕಾರ್ಯಾಗಾರವು ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉಡುಪಿ ಮೀನುಗಾರಿಕಾ ಇಲಾಖೆ ಜಂಟಿನಿರ್ದೇಶಕ ಕೆ..ಗಣೇಶ್ ದೀಪ ಬೆಳಗಿ ಉದ್ಘಾಟಿಸಿ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಗಳು ಈ ಕಾರ್ಯಾಗಾರದ ಪ್ರಯೋಜನ ಪಡೆದು ವ್ಯವಸ್ಥಿತವಾಗಿ ಸಂಘಟನಾತ್ಮಕವಾಗಿ ವ್ಯಾಪಾರಾಭಿವೃದ್ಧಿಯನ್ನು ಮಾಡಿಕೊಳ್ಳಬೇಕೆಂದು ನುಡಿದರು. ಸ್ಕೋಡವೇಸ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿ.ಎನ್.ನಾಯಕ ಮೀನಿನ ಸ್ವಚ್ಛತೆ, ವಿಲೇವಾರಿ, ಮೌಲ್ಯವರ್ಧನೆ ಮೂಲಕ ಆರ್ಥಿಕ ಪ್ರಗತಿ ಹಾಗೂ ಮೀನುಗಾರಿಕೆಗೆ ಬೇಕಾಗುವ ಪರಿಕರಗಳ ಕುರಿತು ಮಾಹಿತಿ ನೀಡಿದರೆ, ಡಾ.ಪ್ರಕಾಶ ಮೇಸ್ತ ಒಣ ಮೀನು ಹಾಗೂ ಹಾಗೂ ಇತರ ಮತ್ಸ್ಯ ಉತ್ಪನ್ನಗಳು ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು, ಡಾ.ವಿಷ್ಣುದಾಸ ಗುನಗ ಆಮದು ರಫ್ತು ವ್ಯಾಪಾರ ಮತ್ತು ಮಾರುಕಟ್ಟೆ ಸಂಪರ್ಕದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮೀನಿಗಾರಿಕಾ ಇಲಾಖೆ ಉ.ಕ.ದ ಉಪನಿರ್ದೇಶಕರಾದ ಕವಿತಾ ಆರ್.ಕೆ.,ಉಡುಪಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಜಿ.ಎಂ.ಶಿವಕುಮಾರ,ಕುಮಟಾ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ, ಸ್ಕೋಡವೇಸ ಸಂಸ್ಥೆಯ ರೈತ ಉತ್ಪಾದಕ ಸಂಸ್ಥೆಯ ಯೋಜನಾ ಮುಖ್ಯಸ್ಥ ಪ್ರಶಾಂತ ನಾಯಕ, ಸಂಪನ್ಮೂಲ ವ್ಯಕ್ತಿ ನೀಲಕಂಠ ಶೇಷಗಿರಿ, ತಾಂತ್ರಿಕ ಅಧಿಕಾರಿ ಪರೇಶ ಹೆಗಡೆ,ಉ.ಕ. ಮತ್ತು ಉಡುಪಿ ಜಿಲ್ಲೆಯ ಸಂಯೋಜಕ ಗಂಗಾಧರ ನಾಯ್ಕ, ಫೀಲ್ಡ ಆಫಿಸರ್ ಮಣಿಕಂಠ ಎನ್.,ಹಾವೇರಿ ಜಿಲ್ಲಾ ಸಂಯೋಜಕ ಜಗದೀಶ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉ.ಕ.,ಉಡುಪಿ ಹಾಗೂ ಹಾವೇರಿ ಜಿಲ್ಲೆಯ ಒಂಭತ್ತು ವಿವಿಧ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಕಂಪನಿಯ ಪ್ರಗತಿಗೆ ಪೂರಕವಾದ ಮಾಹಿತಿಯನ್ನು ಪಡೆದುಕೊಂಡರು.