ಪ್ರವಾಸಕ್ಕೆಂದು ಕರೆದುಕೊಂಡು ಬಂದು ಮಕ್ಕಳಿಗೆ ಹೊಡೆಯುತ್ತಿದ್ದ ಶಿಕ್ಷಕ -ದೃಶ್ಯ ಕಂಡು ಶಿಕ್ಷಕನಿಗೆ ಛಿಮಾರಿ ಹಾಕಿ ತರಾಟೆಗೆ ತೆಗೆದುಕೊಂಡ ಸ್ಥಳೀಯರು
ಕುಂದಾಪುರ: ಉಡುಪಿ ಜಿಲ್ಲೆಯ ಆನೆಗುಡ್ಡೆ ಶ್ರೀವಿನಾಯಕ ಟೆಂಪಲ್‌ಗೆ ಪ್ರವಾಸಕ್ಕೆಂದು ಬಂದ ವೇಳೆ ಶಿಕ್ಷಕನೊಬ್ಬ ಮಕ್ಕಳಿಗೆ ಹೊಡೆಯುತ್ತಿದ್ದ ದೃಶ್ಯ ಕಂಡು ಸ್ಥಳೀಯರು ಹಾಗೂ
ಪ್ರವಾಸಿಗರು ಶಿಕ್ಷಕನನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ.
ಅಲ್ಲದೆ, ಶಿಕ್ಷಕನ ಕೃತ್ಯಕ್ಕೆ ಛೀಮಾರಿ ಹಾಕಿದ್ದಾರೆ. ಈ ವಿಡಿಯೊ ಎಲ್ಲಾ ಕಡೆ ವೈರಲ್ ಆಗಿದೆ.
ಚಿತ್ರದುರ್ಗದ ಮೂಲದ ಶಾಲೆಯ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಛಡಿಯೇಟು ನೀಡುತ್ತಿರುವುದು ಕಂಡುಬಂದಿದೆ. ದೇವಸ್ಥಾನ ನೋಡಿ ಬಸ್ ಹತ್ತಲು ವಿದ್ಯಾರ್ಥಿಗಳು ವಿಳಂಬ ಮಾಡಿದರು ಎಂಬ ಏಕೈಕ ಕಾರಣಕ್ಕೆ ಮಕ್ಕಳಿಗೆ ಬೆತ್ತದಿಂದ ಶಿಕ್ಷಕ ಹೊಡೆದಿದ್ದಾನೆ ಎನ್ನಲಾಗಿದೆ.
ಈ ವೇಳೆ ದೇವಸ್ಥಾನಕ್ಕೆ ಬಂದ ಪ್ರವಾಸಿಗರು ಈ ಅಮಾನವೀಯ ಕೃತ್ಯವನ್ನು ಕಂಡು ವಿಚಾರಿಸಿದ್ದಾರೆ. ಅದಕ್ಕೆ ಆ ಶಿಕ್ಷಕ ವಿಚಾರಿಸಲು ಬಂದ ಪ್ರವಾಸಿಗರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನು ವಿಡಿಯೊ ಮಾಡಿಕೊಂಡಿರುವ ಪ್ರವಾಸಿಗರು ಈ ತಪ್ಪಿತಸ್ಥ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಫೇಸ್‌ಬುಕ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಈ ವಿಡಿಯೊವನ್ನು ಶೇರ್ ಮಾಡಲಾಗಿದ್ದು, ಸಖತ್ ವೈರಲ್ ಆಗಿದೆ ಎನ್ನಲಾಗಿದೆ.