ಭಟ್ಕಳದ ಹಿರಿಯ ಪತ್ರಕರ್ತ ರಾಘವೇಂದ್ರ ಭಟ್ಟ ಜಾಲಿ ಹೃದಯಾಘಾತದಿಂದ ನಿಧನ
ಭಟ್ಕಳ-ಭಟ್ಕಳದ ಹಿರಿಯ ಪತ್ರಕರ್ತ ನೇರ ನುಡಿಯ ದೈರ್ಯಶಾಲಿ ವರದಿಗಾರ ರಾಘವೇಂದ್ರ ಭಟ್ ಜಾಲಿ (52 ) ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಶಿವಮೊಗ್ಗದಲ್ಲಿ ನಿಧನರಾಗಿದ್ದಾರೆ.
ದಶಕಗಳ ಅಧಿಕ ಕಾಲ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಅವರು ಕಳೆದ ಎರಡು ವರ್ಷದಿಂದ ಕನ್ನಡ ಜನಾಂತರಂಗ ಪತ್ರಿಕೆಯ ಉತ್ತರ ಕನ್ನಡ ಜಿಲ್ಲಾ ವರದಿಗರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಿವಮೊಗ್ಗದಲ್ಲಿ ತಂದೆ, ತಾಯಿ ವಾಸ್ತವ್ಯ ಇದ್ದುದರಿಂದ ಮಂಗಳವಾರ ಮಧ್ಯಾಹ್ನ ಶಿವಮೊಗ್ಗಕ್ಕೆ ಹೋಗಿದ್ದರು. ಆರಾಮವಾಗಿಯೇ ಇದ್ದ ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಿರಿಯ ಪತ್ರಕರ್ತ ರಾಘು ಭಟ್ಟ ಅವರ ದಿಢೀರ ನಿಧನಕ್ಕೆ ಭಟ್ಕಳದ ಪತ್ರಕರ್ತರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಭಟ್ಕಳದ ಹಿರಿಯ ಪತ್ರಕರ್ತ ರಾಘು ಭಟ್ ಅವರ ನಿಧನಕ್ಕೆ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕವು ತೀವ್ರ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.