Let Ananthamurthy Hegde be Uttara Kannada BJP candidate – demand of BJP activists in Bhatkal
ಅನಂತಮೂರ್ತಿ ಹೆಗಡೆ ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿಯಾಗಲಿ-
ಭಟ್ಕಳದಲ್ಲಿ ಬಿಜೆಪಿ ಸಕ್ರಿಯ ಕಾರ್ಯಕರ್ತರ ಆಗ್ರಹ*
ಭಟ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಕಾರ್ಯಕರ್ತರು*
ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡುವ ಅಗತ್ಯ ಇದ್ದು, ಕಳೆದ 1 ವರ್ಷದಿಂದ ಜನ ಪರವಾಗಿ ಕೆಲಸ ಮಾಡುತ್ತ ಬಂದಿರುವ ಅನಂತಮೂರ್ತಿ ಹೆಗಡೆ ಬಿಜೆಪಿಯ ಅಭ್ಯರ್ಥಿಯಾಗಬೇಕು ಎಂದು ಭಟ್ಕಳದಲ್ಲಿ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಶನಿವಾರ ಇಲ್ಲಿನ ರಾಯಲ್ ಓಕ್ ಹೊಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡ ವಿವೇಕ ನಾಯ್ಕ ಮತ್ತಿತರರು ಮಾತನಾಡಿದರು. ರಾಜ್ಯದ ಅಭಿವೃದ್ಧಿಗೆ ಉತ್ತರಕನ್ನಡ ಜಿಲ್ಲೆಯ ಕೊಡುಗೆ ಸಾಕಷ್ಟಿದೆ. ಆದರೆ ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಉತ್ತಮ ಆಸ್ಪತ್ರೆಯೂ ಇಲ್ಲದೇ ಇಲ್ಲಿನ ಜನರು ಪಕ್ಕದ ಜಿಲ್ಲೆಗಳಿಗೆ ತೆರಳುವಂತಾಗಿದೆ. ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳಿಗೆ ಜಿಲ್ಲೆಯ ನೆನಪಾಗುತ್ತಿದೆ. ಭಟ್ಕಳ ಅಪ್ಪಟ ಹಿಂದುತ್ವದ ಬೆಲ್ಟ್ ಆಗಿದ್ದರೂ ಅಭಿವೃದ್ಧಿ ಶೂನ್ಯವಾಗಿದೆ. ಪಕ್ಕದ ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಹಿಂದುತ್ವದ ಜೊತೆಗೆ ಯಥೇಚ್ಛವಾಗಿ ಅಭಿವೃದ್ಧಿಯನ್ನು
ಸಾಧಿಸಲಾಗಿದೆ. ಆದರೆ ಇದು ನಮಗೆ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲದಾಗಿದೆ. ಈ ನಿಟ್ಟಿನಲ್ಲಿ ಯುವಕರಾಗಿರುವ ಅನಂತಮೂರ್ತಿ ಹೆಗಡೆ ನಮಗೆಲ್ಲರಿಗೂ ಆಶಾಕಿರಣರಾಗಿದ್ದಾರೆ. ಆರೆಸ್ಸೆಸ್ ಹಿನ್ನೆಲೆ ಇರುವ ಅನಂತಮೂರ್ತಿ ಹೆಗಡೆಯವರು ಹಲವು ಸರಕಾರಿ ಶಾಲೆಯ ಮಕ್ಕಳಿಗೆ ಕುಡಿಯುವ ನೀರು ಒದಗಿಸಿರುವುದಲ್ಲದೇ, ಜನಸಾಮಾನ್ಯರ ಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತ ಬಂದಿದ್ದಾರೆ. ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಯಶಸ್ವಿ ಪಾದಯಾತ್ರೆಯನ್ನು ನಡೆಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿಗೆ ಹಲವು ರೀತಿಯ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಅನುಷ್ಠಾನಕ್ಕೆ ಬದ್ಧರಾಗಿದ್ದಾರೆ. ಪ್ರಸಕ್ತವಾಗಿ ಬಿಜೆಪಿ ಪಕ್ಷ ಸಂಘಟನೆ ಕಳೆಗುಂದುತ್ತಿದ್ದು, ಅನಂತಮೂರ್ತಿ ಹೆಗಡೆಯವರಿಗೆ ಪಕ್ಷದ ಟಿಕೇಟ್ ನೀಡುವುದರಿಂದ ಕಾರ್ಯಕರ್ತರಿಗೆ ಹೆಚ್ಚಿನ ಬಲ ಸಿಕ್ಕಂತಾಗುತ್ತದೆ. ಪಕ್ಷದ ವರಿಷ್ಠರು ಈ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಶ್ರೀಧರ ನಾಯ್ಕ, ದಯಾ ನಾಯ್ಕ, ಪಾಂಡು ನಾಯ್ಕ, ತಿಮ್ಮಪ್ಪ ನಾಯ್ಕ, ರಾಮಾ ನಾಯ್ಕ, ವೆಂಕಟೇಶ ನಾಯ್ಕ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪಕ್ಕದ ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಹಿಂದುತ್ವದ ಜೊತೆಗೆ ಯಥೇಚ್ಛವಾಗಿ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ಆದರೆ ಇದು ನಮಗೆ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲದಾಗಿದೆ. ಈ ನಿಟ್ಟಿನಲ್ಲಿ ಯುವಕರಾಗಿರುವ ಅನಂತಮೂರ್ತಿ ಹೆಗಡೆ ನಮಗೆಲ್ಲರಿಗೂ ಆಶಾಕಿರಣರಾಗಿದ್ದಾರೆ.