ಭಟ್ಕಳ ತಹಸೀಲ್ದಾರ ಸುಮಂತ್.ಬಿ ಅವರಿಂದ ಪ್ರಮುಖ ರಾಜಕೀಯ ಪಕ್ಷಗಳ ತಾಲೂಕ ಅಧ್ಯಕ್ಷರಿಗೆ ಮತದಾರರ ಪಟ್ಟಿ ವಿತರಣೆ ಮತ್ತು
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2023ಕ್ಕೆ ಚಾಲನೆ
ಭಟ್ಕಳ : ಮತದಾರರ ಕರಡು ಪ್ರತಿಯನ್ನು ರಾಜಕೀಯ ಪಕ್ಷದ ಪ್ರಮುಖರಿಗೆ ವಿತರಿಸುವ ಮೂಲಕ ತಹಸೀಲ್ದಾರ್ ಡಾ. ಸುಮಂತ್ ಬಿ.ಇ. ಅವರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2023ಕ್ಕೆ ತಾಲೂಕಾ ಆಡಳಿತ ಸೌಧದ ಎರಡನೇ ಮಹಡಿಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ತಹಸೀಲ್ದಾರ್ ಸುಮಂತ್.ಬಿ ಅವರು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಚುನಾವಣಾ ಆಯೋಗದ ಸೂಚನೆಯಂತೆ ಒಂದು ತಿಂಗಳು ಕಾಲ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯಲಿದೆ. ಮತದಾರರು ಇದರ ಸದುಪಯೋಗ ಪಡೆದುಕೊಂಡು ತಿದ್ದುಪಡಿ, ಹೆಸರು ಸೇರಿಸುವುದು, ವರ್ಗಾವಣೆ ಇತ್ಯಾದಿಗಳು, ಹೆಸರು ತಿದ್ದುಪಡಿ, ಪೋಟೋ ಬದಲಾವಣೆ ಇತ್ಯಾದಿಗಳನ್ನು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿಗೆ ಸಂಬAಧಪಟ್ಟ ಮತಗಟ್ಟೆ ಅಧಿಕಾರಿ (ಬಿಎಲ್)ಗಳ ಬಳಿ ಅವಶ್ಯವಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 8 ಕೊನೆಯ ದಿನವಾಗಿದೆ. ತಾಲೂಕಿನಲ್ಲಿ ನ.12, 20, ಡಿ.3, 4ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಂತಿಮವಾಗಿ ಜ.5, 2023ರಂದು ಮತದಾರರ ಪಟ್ಟಿ ಪ್ರಕಟಣೆ ನಡೆಯಲಿದೆ ಎಂದರು.
ಆನಲೈನ್ ಮೂಲಕವೂ ಮತದಾರರ ಪಟ್ಟಿಗೆ ಪರಿಷ್ಕರಣೆಗೆ ಅರ್ಜಿ ಸಲ್ಲಿಸಬಹುದು ಎಂದ ಅವರು ಮತದಾರ ಮಟ್ಟಿಯ ಪರಿಷ್ಕರಣೆಯ ಯಶಸ್ಸಿಗೆ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ. ತಾಲೂಕಿನಲ್ಲಿ 1,31,742 ಮತದಾರರಿದ್ದು, ಅದರಲ್ಲಿ 66891 ಪುರುಷರು, 64851 ಮಹಿಳೆಯರು ಸೇರಿದ್ದಾರೆ. ತಾಲೂಕಿನಲ್ಲಿ ಒಟ್ಟೂ 140 ಮತಗಟ್ಟೆಗಳಿವೆ ಎಂದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರರು ರಾಜಕೀಯ ಪಕ್ಷಗಳ ಪ್ರಮುಖರಾದ ಜೆ.ಡಿ.ಎಸ್. ತಾಲೂಕಾ ಅಧ್ಯಕ್ಷ ಇನಾಯತ್ವುಲ್ಲಾ ಶಾಬಂದ್ರಿ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮೋಹನ ನಾಯ್ಕ, ಸಚಿನ್ ಮಹಾಲೆ, ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ ಅವರಿಗೆ ಮತದಾರರ ಪಟ್ಟಿಯನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಡಿ.ಎಸ್. ತಾಲೂಕಾ ಅಧ್ಯಕ್ಷ ಇನಾಯತ್ವುಲ್ಲಾ ಶಾಬಂದ್ರಿ ಮತಗಟ್ಟೆಗಳಲ್ಲಿರುವ ಮತಗಟ್ಟೆ ಅಧಿಕಾರಿಗಳಿಗೆ ಸರಿಯಾಗಿ ಪರಿಷ್ಕರಣೆ ಮಾಡುವಂತೆ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಬೇಕು. ಚುನಾವಣೆ ಹತ್ತಿರ ಇರುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಗೊಂದಲಗಳು ಇಲ್ಲದಂತೆ ಆಗಬೇಕು ಎಂದರು. 18 ವರ್ಷ ಆದ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.