*ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಸಚಿವ ಮಾಂಕಳ ವೈದ್ಯ ಕಛೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ :- ಸಚಿವ ಮಂಕಾಳ ವೈದ್ಯರಿಗೆ ಅನಂತಮೂರ್ತಿ ಹೆಗಡೆ ಸವಾಲ್*- ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ*
*ಕುಮಟಾ*:- ಮುಂಬರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕುಮಟಾದಲ್ಲಿ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದಿದ್ದರೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಛೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರ ಕೂಗಿಗೆ ಉಸ್ತುವಾರಿ ಸಚಿವರು ಸ್ಪಂದಿಸಿ ಹಣ ಬಿಡುಗಡೆ ಮಾಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಸವಾಲ್ ಹಾಕಿದ್ದಾರೆ
ಅವರು ಮುಂಬರುವ ಬಜೆಟ್ ನಲ್ಲಿ ಕುಮಟಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಮಂಜೂರು ಮಾಡಬೇಕು ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ ಯೋಜನಗಳ ಘೋಷಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಕುಮಟಾದಿಂದ ಭಟ್ಕಳದವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಪಾದಯಾತ್ರೆಯ ಚಾಲನೆಯಲ್ಲಿ ಮಾತನಾಡುತ್ತಾ,
ಈ ಹಿಂದೆ ನಮ್ಮ ಕುಮಟಾದ ಶಾಸಕ ದಿನಕರ್ ಶೆಟ್ಟಿಯವರು, ವಕೀಲ ಆರ್. ಜಿ. ನಾಯ್ಕರವರು ಹೀಗೆ ಅನೇಕರು ಸೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಾಕಷ್ಟು ಹೋರಟ ಮಾಡಿದ ಫಲವಾಗಿ ಕುಮಟಾದಲ್ಲಿ ಆಸ್ಪತ್ರೆ ಮಂಜೂರು ಮಾಡಿಸಿದ್ದರು, ಆದರೆ ಈ ಸರ್ಕಾರದಲ್ಲಿ ಆ ಆಸ್ಪತ್ರೆಗೆ ಹಣವನ್ನು ಕೊಡುವ ಕೆಲಸವಾಗಿಲ್ಲ, ಆದ್ದರಿಂದ ಇಂದು ನಮ್ಮವರು ಮಾಡಿದ ಹೋರಾಟವೆಲ್ಲ ವ್ಯರ್ಥವಾಗುತ್ತದೆ. ಇದೇ ತಿಂಗಳ 16 ರಂದು ಬಜೆಟ್ ಅಧಿವೇಶನವಿದ್ದು, ಆ ಬಜೆಟ್ ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ತಕ್ಷಣ ಹಣ ಮಂಜೂರಾಗಬೇಕು, ಹಾಗೂ ನಮ್ಮ ಭಾಗದಲ್ಲಿ ಮೆಡಿಕಲ್ ಕಾಲೇಜು ಕೂಡ ಆಗಬೇಕು, ಎಲ್ಲಿ ಮೆಡಿಕಲ್ ಇರೋದಿಲ್ಲವೋ ಅಲ್ಲಿ ಆಸ್ಪತ್ರೆ ನಡೆಸುವುದು ತುಂಬ ಕಷ್ಟ. ಘಟ್ಟದ ಮೇಲೊಂದು, ಘಟ್ಟದ ಕೆಳಗೊಂದು ಆಸ್ಪತ್ರೆಬೇಕು, ನಮ್ಮ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ಸಮಸ್ಯೆ ಇದ್ದು, ಯಾವುದೇ ಕೈಗಾರಿಕೆ ಇಲ್ಲ, ಜಿಲ್ಲೆಯ ಯುವಕರು ಬೇರೆ ರಾಜ್ಯಗಳಿಗೆ ಹೋಗಿ ಉದ್ಯೋಗ ಮಾಡುವ ಸ್ಥಿತಿಯಿದೆ. ಇಲ್ಲಿರುವ ಅಪ್ಪ ಅಮ್ಮಗೆ ಅನಾರೋಗ್ಯವಾದರೆ ಚಿಕಿತ್ಸೆ ಪಡೆಯಲು ಸರಿಯಾದ ಆಸ್ಪತ್ರೆ ಇಲ್ಲ. ಬೇರೆ ಕಾಯಿಲೆ ಬಂದರೂ ಕೂಡ ಮಂಗಳೂರಿಗೆ ಹೋಗವ ಪರಿಸ್ಥಿತಿ ಇದೆ ಎಂದರು.
ಹಿರೇಗುತ್ತಿಯಲ್ಲಿ ಸರ್ಕಾರ ಅಧೀನದ ಕೆಐಎಡಿಬಿಯ 1800 ಎಕರೆ ಜಾಗವಿದೆ. ಈ ಹಿಂದೆ ಹಲವಾರು ಯೋಜನೆ ಮಾಡುವ ತಯಾರಿ ಆದರೂ ಇನ್ನೂವರೆಗೂ ಯಾವುದೇ ಯೋಜನೆ ಆಗಿಲ್ಲ. ಕನಿಷ್ಠ 1000 ಎಕರೆಯಲ್ಲಿ ಸಾಪ್ಟ್ ವೇರ್ ಪಾರ್ಕ್ ಮಾಡಿ, ಇನ್ಪೋಸಿಸ್, ವಿಪ್ರೊ ಇನ್ನಿತರ ಕಂಪನಿಗಳಿಗೆ ಜಾಗ ನೀಡಿ ಅವರಿಗೆ ಆಹ್ವಾನ ನೀಡಿ, ಹಲವಾರು ಪ್ಯಾಕ್ಟರಿಗಳು ಆಗುತ್ತವೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕೂಡ 10, 20 ಏಕರೆಯಲ್ಲಿ ಇಂಡಸ್ಟ್ರೀಯಲ್ ಎಸ್ಟೇಟ್ ಮಾಡಿದಾಗ ಕೂಡ ಇಲ್ಲಿನ ಯುವಕರಿಗೆ ಉದ್ಯೋಗ ಸಿಗುತ್ತದೆ. ಸರ್ಕಾರವೇ ಇಂಡಸ್ಟ್ರಿಯಲ್ ಏರಿಯಾ ಮಾಡಿ ಪ್ಯಾಕ್ಟರಿಗಳಿಗೆ ಹಂಚಿಕೆ ಮಾಡಬೇಕು. ಕುಮಟಾದಿಂದ ಇಂದು ಪಾದಯಾತ್ರೆ ಹೊರಟು ಬುಧವಾರ ಭಟ್ಕಳದಲ್ಲಿ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರವರಿಗೆ ಮನವಿ ನೀಡುತ್ತೇವೆ. ಇದು ಸರ್ಕಾರಕ್ಕೆ ಜಿಲ್ಲೆಯ ಜನ ಕೊಡುತ್ತಿರುವ ಎಚ್ಚರಿಕೆಯಾಗಿದೆ. ಒಂದು ವೇಳೆ ಬಜೆಟ್ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಆಸ್ಪತ್ರೆಗೆ ಹಣ ನೀಡಿಲ್ಲ ಎಂದರೆ, ನಮ್ಮ ಈ ಹೋರಾಟವನ್ನು ನಿರ್ಲಕ್ಷ್ಯ ಮಾಡಿದರೆ, ಮುಂದೆ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಭಟ್ಕಳದ ಕಛೇರಿ ಮುಂದೆ ಕುಳಿತು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ನಂತರ ಶಾಸಕ ದಿನಕರ್ ಶೆಟ್ಟಿ ಮಾತನಾಡಿ, ಬಹಳಷ್ಟು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯದಿಲ್ಲ. ಉತ್ತರ ಕನ್ನಡ ಜಿಲ್ಲೆ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎಂದು ಅನೇಕ ಬಾರಿ ನಾನು ವಿಧಾನಸಭೆಯ ಅಧಿವೇಶನದಲ್ಲಿ ಹೇಳಿದ್ದೇನೆ. ಕರಾವಳಿ ಎಂದರೆ ಕೇವಲ ಮಂಗಳೂರು, ಉಡುಪಿ, ಹಾಗೂ ಮಲ್ಪೆ ಎಂಬಂತಾಗಿದೆ. ಈ ಹಿಂದೆ ನಮ್ಮ ಸರ್ಕಾರ ಇದಂತಹ ಸಂದರ್ಭದಲ್ಲಿ ಬಜೆಟ್ ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಘೋಷಣೆ ಮಾಡಿದ್ದರು. ನಂತರ ಆಸ್ಪತ್ರೆ ನಿರ್ಮಾಣಕ್ಕೆ ಜಾಗವನ್ನು ನೋಡಲಾಗಿತ್ತು. ಆದರೆ ಇಂದಿನ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ್ ಆಸ್ಪತ್ರೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದರು. ದಯವಿಟ್ಟು ಇದು ಅನಂತಮೂರ್ತಿ ಹೆಗಡೆಯವರ ಒಬ್ಬರ ವಿಷಯವಲ್ಲ. ಜಿಲ್ಲೆಯ ಜನರ ಸ್ವಾಭಿಮಾನದ ವಿಷಯ. ನಮ್ಮ ಜಿಲ್ಲೆ ಕೇವಲ ತ್ಯಾಗ ಮಾಡಲಿಕ್ಕೆ ಬೇಕಾ? ಕೆಟ್ಟ ಕೆಲಸದ ಯೋಜನೆ ಇದ್ದರೆ ನಮ್ಮ ಜಿಲ್ಲೆಗೆ, ಓಳ್ಳೆಯ ಯೋಜನೆ ಇದ್ದರೆ ಬೇರೆ ಜಿಲ್ಲೆಗೆ ಎಂಬಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಆಸ್ಪತ್ರೆ ಆಗುತ್ತದೆ. ನಮ್ಮ ಹೋರಾಟ ಆಸ್ಪತ್ರೆ ಆಗುವವರೆಗೆ ಇಲ್ಲಬಾರದು. ಅನಂತಮೂರ್ತಿ ಹೆಗಡೆ ಯವರ ಹೋರಾಟಕ್ಕೆ ಕೈಜೋಡಿಸಿ, ಕುಮಟಾದಲ್ಲಿ ಆಸ್ಪತ್ರೆ ಆಗಲೇಬೇಕು ಇಂದು ಹೋರಾಡೋಣ. ಅನಂತಮೂರ್ತಿ ಹೆಗಡೆ ಯಾವ ರೀತಿ ಹೇಳುತ್ತಾರೋ ಅವರಿಗೆ ನನ್ನ ಬೆಂಬಲವಿದೆ. ನಾನು ಮತ್ತೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇನೆ ಎಂದರು.
ವಕೀಲ ಆರ್. ಜಿ. ನಾಯ್ಕ ಮಾತನಾಡಿ, ಜನರ ಜೀವ ಉಳಿಸಲು ಒಂದು ಆಸ್ಪತ್ರೆ ಕೊಡಿ ಮತ್ತು ಮೆಡಿಕಲ್ ಕಾಲೇಜು ನೀಡಿ ಎಂದು ಎಷ್ಟು ಬಾರಿ ಕೇಳಬೇಕು. ಏನೆ ಮಾಡಿ ನಮಗೆ ಬೇಕಾಗಿರುವುದು ಜನರ ಜೀವ ಉಳಿಸಲು ಒಂದು ಆಸ್ಪತ್ರೆ ನೀಡಿ, ಅದಕ್ಕೆ ಏನು ಬೇಕು ಆ ವ್ಯವಸ್ಥೆ ಮಾಡಿ ಎಂದ ಅವರು, ಜನರಿಗೆ ಅತೀ ಅವಶ್ಯವಿರುವ ಆಸ್ಪತ್ರೆ ನೀಡಲು ಮೀನಾಮೇಷ ಯಾಕೆ. ಅನಂತಮೂರ್ತಿ ಹೆಗಡೆ ಮಾಡುತ್ತಿರುವ ಎಲ್ಲಾ ಹೋರಾಟಕ್ಕೆ ಇಡೀ ಉತ್ತರ ಕನ್ನಡದ ಜನ ಬೆಂಬಲ ನೀಡಿ ಎಂದು ಕೇಳುತ್ತೇನೆ. ಶಾಸಕರು ಮುಂಬರುವ ಅಧಿವೇಶನದಲ್ಲಿ ಗುಡುಗಬೇಕು. ಸಂದರ್ಭ ಬಂದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಾವು ಸಿದ್ಧರಿದ್ದೇವೆ ಎಂದರು.
ನಂತರ ಕೆಡಿಸಿಸಿ ಬ್ಯಾಂಕ್ ನಿದೇರ್ಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಅನಂತಮೂರ್ತಿ ಹೆಗಡೆ ಪ್ರಾಮಾಣಿಕವಾಗಿ ಜನರ ಪರವಾಗಿ ಹೋರಾಟ ಮಾಡುತ್ತಿದ್ದಾರೆ, ಇಂತಹ ಹೋರಾಟಗಳಿಗೆ ನಮ್ಮ ಬೆಂಬಲ ಅಗತ್ಯವಾಗಿದೆ. ಸರ್ಕಾರ ಈ ಕೂಡಲೇ ಆಸ್ಪತ್ರೆಗೆ ಹಣ ಮಂಜೂರು ಮಾಡಬೇಕು ಇದು ಜಿಲ್ಲೆಯ ಜನರ ಹಕ್ಕೋತ್ತಾಯವಾಗಿದೆ ಎಂದರು.
ಇಂದು ಪಾದಯಾತ್ರೆಯೂ ಕುಮಟಾದಿಂದ ಹೊನ್ನಾವರದ ವರೆಗೆ ಸಾಗಿದ್ದು, ಅಳ್ವೆಕೋಡಿ, ಹಂದಿಗೋಣ, ಧಾರೇಶ್ವರ, ಕರ್ಕಿಕೋಡಿ, ಕರ್ಕಿಗಳಲ್ಲಿ ದಾರಿಯುದ್ದಕ್ಕೂ ಪ್ರಚಾರ ಸಭೆಗಳನ್ನು ಮಾಡುತ್ತಾ ಜನರಿಗೆ ಆಸ್ಪತ್ರೆಯ ಅಗತ್ಯತೆ ಬಗ್ಗೆ ಅರಿವು ಮೂಡಿಸಿದರು. ಪಾದಯಾತ್ರೆಯಲ್ಲಿ ರಾಜ್ಯ ಅನ್ನದಾತ ರೈತ ಸಂಘದ ಅಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಯ ಅಧ್ಯಕ್ಷ ಉಮೇಶ ಹರಿಕಾಂತ ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.