ಕುಮಟಾ ಹೊಳೆಗದ್ದೆ ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ -ಪೊಲೀಸ್ ಪ್ರಕರಣ ದಾಖಲು
ಕುಮಟಾ: ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊಳೆಗದ್ದೆ ಟೋಲ್ ನಲ್ಲಿ ನಡೆದಿದೆ. ಟೋಲ್ ನಲ್ಲಿ ಫಾಸ್ಟ್ ಟ್ಯಾಗ್ ತಾಂತ್ರಿಕ ಸಮಸ್ಯೆಯಿಂದ ಪ್ರಯಾಣಿಕರು ಮತ್ತು ಟೋಲ್ ಸಿಬ್ಬಂದಿಗಳ ನಡುವೆ ಜಗಳವಾಗಿದ್ದು, ಈ ವೇಳೆ ರೊಚ್ಚಿಗೆದ್ದ ಟೋಲ್ ಸಿಬ್ಬಂದಿ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ವಾಹನದ ಗ್ಲಾಸ್ ಪುಡಿ ಮಾಡಿದ್ದಾನೆ.
ಮಹಿಳೆ ಹಾಗೂ ಓರ್ವ ಪುರುಷನಿಗೆ ಗಾಯವಾಗಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಮಂಗಳೂರು ನಗರದ ಪಲ್ನೀರಿನ ಮುಜೀಜ್ ಎಂಬಾತನ ಕುಟುಂಬ, ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ಹೋಗುತಿದ್ದರು. ಈ ವೇಳೆ ಕುಮಟಾ ಟೋಲ್ ಗೇಟ್ ನಲ್ಲಿ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತವಾಗದೇ ಸಮಸ್ಯೆಯಾದಾಗ, ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ಸಹ ಸಿಬ್ಬಂದಿ ಮಜೀಜ್ ಸೈಯದ್ ರವರ ಕಾರಿನ ಗಾಜು ಪುಡಿ ಮಾಡಿದ್ದಲ್ಲದೆ, ಮಹಿಳೆಯರ ಮೇಲೆ ಸಹ ಹಲ್ಲೆ ಮಾಡಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.