ಭಟ್ಕಳದ ಹೇಬಳೆ ಗ್ರಾಮ ದ ತೆಂಗಿನಗುಂಡಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮತ್ತು ಮಾಜಿ ಶಾಸಕ ಸುನೀಲ್ ನಾಯ್ಕ ನೇತೃತ್ವದ ಲ್ಲಿ ಆಡಳಿತ ವಿರೋಧದ ನಡುವೆಯೂ ಹಾರಾಡಿದ ಹನುಮ ಧ್ವಜ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿಯ ತೆಂಗಿನಗುಂಡಿ ಗ್ರಾಮದಲ್ಲಿ ಅಧಿಕಾರಿಗಳು ತೆರವು ಮಾಡಿದ್ದ ಸಾವರ್ಕರ್ ಧ್ವಜದ ಕಟ್ಟೆಯಲ್ಲಿ ಸೋಮವಾರ ಸಂಸದ ಅನಂತಕುಮಾರ್ ಹೆಗಡೆ ಅವರೇ ಖುದ್ದು ಬಂದು ಹನುಮ ಧ್ವಜವನ್ನು ಹಾರಿಸಿ ನಾಮಫಲಕ ಅಳವಡಿಸಿ ಸಡ್ಡು ಹೊಡೆದಿದ್ದಾರೆ.
ತೆಂಗಿನಗುಂಡಿಯಲ್ಲಿ ನಿರ್ಮಾಣ ಮಾಡಿದ್ದ ವೀರ ಸಾವರ್ಕರ್ ವೃತ್ತದ ಕಟ್ಟೆಯನ್ನು ಯಾವುದೇ ಪರವಾನಗಿ ಇಲ್ಲದೇ ನಿರ್ಮಾಣ ಮಾಡಲಾಗಿದೆ ಎಂಬ ಕಾರಣದಿಂದ ಗ್ರಾಮ ಪಂಚಾಯಿತಿ ಇದನ್ನು ತೆರವು ಮಾಡಿತ್ತು. ಪರಿಣಾಮ ಇದರಿಂದಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರು ತೀವ್ರವಾಗಿ ಈ ಕ್ರಮದ ವಿರುದ್ದ ಆಕ್ರೋಶಗೊಂಡಿದ್ದರು. ಆದರೆ ಈಗ ಸಂಸದ ಅನಂತಕುಮಾರ್ ಹೆಗಡೆ ಅವರೇ ಬಂದು ಈ ವೃತ್ತದಲ್ಲಿ ಭಗವಾನ್ ಧ್ವಜ ಹಾರಿಸಿರುವುದು ಧ್ವಜ ದಂಗಲ್ ಗೆ ಕಾರಣವಾಗಿದೆ.
ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಾವರ್ಕರ್ ಧ್ವಜ ಕಟ್ಟೆ ನಿರ್ಮಾಣಕ್ಕೆ ವಿರೋಧ ಮಾಡಿದರೆ, ಇನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಪಂಚಾಯಿತಿಯಲ್ಲಿಯೇ ಎರಡು ಶಕ್ತಿ ಕೇಂದ್ರಗಳಾಗಿ ನಿರ್ಮಾಣ ಆಗಿದ್ದವು. ಇದೆಲ್ಲದ ನಡುವೆ ಅಧಿಕಾರಿಗಳು ಜೆಸಿಬಿ ಮೂಲಕ ಧ್ವಜದ ಕಟ್ಟೆಯನ್ನು ಧ್ವಂಸ ಮಾಡಿದ್ದರು. ಇದರ ವಿರುದ್ದ ಹೊತ್ತಿಕೊಂಡಿದ್ದ ಕಿಡಿ ಈಗ ಮತ್ತೆ ಧ್ವಜ ಹಾರಾಟಕ್ಕೆ ಕಾರಣವಾಗಿದೆ.
ಈ ಹಿಂದೆ ಇಲ್ಲಿ ನಿರ್ಮಾಣ ಮಾಡಿದ್ದ ಧ್ವಜಕಟ್ಟೆಯನ್ನು ಅಧಿಕಾರಿಗಳು ಪಂಚಾಯಿತಿ ಸದಸ್ಯರ ಅರಿವಿಗೆ ಬಾರದ ರೀತಿಯಲ್ಲಿ ನಾಶ ಮಾಡಿದ್ದಾರೆ. ಇದರ ಹಿಂದೇ ಯಾರು ಇದ್ದಾರೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟ ಪಡಿಸಬೇಕು ಎಂದು ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದರು.