*ಸರಾಬಿ ಹೊಳೆ ಹೋರಾಟ ಸಮಿತಿಯಿಂದ ಸಹಾಯಕ ಆಯುಕ್ತರ ಭೇಟಿ; ನದಿ ನೈರ್ಮಲ್ಯಕ್ಕೆ ಒತ್ತು ನೀಡುವಂತೆ ಆಗ್ರಹ*
ಭಟ್ಕಳ: ಇಲ್ಲಿನ ಜನರ ಜೀವನದಿಯಾಗಿರುವ ಸರಾಬಿ ಹೊಳೆಯನ್ನು ರಕ್ಷಿಸಬೇಕು, ಅದರ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಸರಾಬಿ ನದಿ ರಕ್ಷಿಸಿ ಹೋರಾಟ ಸಮಿತಿಯ ನಿಯೋಗವು ಬುಧವಾರ ಸಹಾಯಕ ಆಯುಕ್ತರನ್ನು ಭೇಟಿಯಾಗಿ ನದಿಯನ್ನು ರಕ್ಷಿಸುವಲ್ಲಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿತು.
ಈ ಸಂದರ್ಭ ನಿಯೋಗಕ್ಕೆ ಭರವಸೆ ನೀಡಿದ ಸಹಾಯಕ ಆಯುಕ್ತೆ ಡಾ.ನಯನಾ, ಸರಾಬಿ ನದಿ ಮಾಲಿನ್ಯ ನಿರ್ಮೂಲನೆಗೆ ಮುಂದಿನ ವಾರ ಸಭೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.
ಸರಬಿ ನದಿಯಿಂದ ಹೂಳನ್ನು ತೆಗೆದು ಸ್ವಚ್ಚಗೊಳಿಸಬೇಕೆಂದು ಆಗ್ರಹಿಸಿ ಇತ್ತಿಚೆಗೆ ಹೋರಾಟ ಸಮಿತಿಯು ಬೃಹತ್ ಪ್ರತಿಭನಾ ಮೆರವಣೆಗೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಇದರ ಮುಂದುವರೆದ ಭಾಗವಾಗಿ ನಿಯೋಗವು ಸಹಾಯಕರನ್ನು ಭೇಟಿಯಾಗಿ ಇಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತೆ ಡಾ.ನಯನಾ, ಈ ನಿಟ್ಟಿನಲ್ಲಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದೊಳಗೆ ಘೌಸಿಯಾ ಬೀದಿಯ ವೆಟ್‌ವೆಲ್‌ನ ಬೇರಿಂಗ್ ಸಾಮರ್ಥ್ಯ ಮತ್ತು ತಗ್ಗು ಪ್ರದೇಶಕ್ಕೆ ನೀರು ಹರಿಸುವುದರಿಂದ ಆಗಬಹುದಾದ ಹಾನಿಯನ್ನು ನಿರ್ಣಯಿಸಲಾಗುವುದು, ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೋರಾಟ ಸಮಿತಿಯ ನಿಯೋಗದಲ್ಲಿ ಮೌಲವಿ ಅಂಜುಮ್ ಗಂಗಾವಳಿ ನದ್ವಿ, ಡಾ.ಮುಹಮ್ಮದ್ ಹನೀಫ್ ಶಬಾಬ್, ಅಬ್ದುಲ್ ಸಮಿ ಮೆಡಿಕಲ್, ಕೆ.ಎಂ.ಅಶ್ಫಾಕ್, ಮುಹಮ್ಮದ್ ಹುಸೇನ್, ಮುಸ್ತಫಾ ಅಸ್ಕರಿ, ಶಮೂನ್ ಹಾಜಿ ಫಖಿ, ಮುಬಾಶಿರ್ ಹಲ್ಲಾರೆ, ಮೌಲಾನಾ ಇರ್ಷಾದ್ ನದ್ವಿ ಮತ್ತಿತರರು ಉಪಸ್ಥಿತರಿದ್ದರು.