ಮುರ್ಡೇಶ್ವರದಲ್ಲಿ ಪ್ರತಿವರ್ಷ ಮಹಾ ಶಿವರಾತ್ರಿ ಜಾಗರಣೆ ಉತ್ಸವ ಕಾರ್ಯಕ್ರಮ ಆಚರಿಸಲಾಗುವುದು-ಸಚಿವ ಮಾಂಕಳ ವೈದ್ಯ
ಮುರುಡೇಶ್ವರ: ಮುರ್ಡೇಶ್ವರದಲ್ಲಿ ಮಹಾ ಶಿವರಾತ್ರಿ ಜಾಗರಣೆ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಜಾಗರಣೆ ಉತ್ಸವವನ್ನು ವಿಜೃಂಭಣೆಯಿಂದ ಮುಂದುವರೆಸಿಕೊಂಡು ಹೋಗಲಾಗುವುದು. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮೂಲಕ ಮಹಾಶಿವರಾತ್ರಿ ಜಾಗರಣೆ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ದೇವರನ್ನು ನಂಬಿ ಕೆಲಸ ಮಾಡಬೇಕು, ದೇವರಲ್ಲಿ ವಿಶ್ವಾಸ ಇಡಬೇಕು. ಮುರುಡೇಶ್ವರದ ಊರಿನವರ ಸಹಕಾರದಿಂದ ಇದೇ ಮೊದಲ ಬಾರಿಗೆ ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುರುಡೇಶ್ವರದ ಸಮಗ್ರ ಅಭಿವೃದ್ಧಿಗೆ ಸಕಲ ಪ್ರಯತ್ನ ಮಾಡಲಾಗುವುದು ಎಂದರು.
ಶಿವರಾತ್ರಿ ಜಾಗರಣೆ ಕಾರ್ಯಕ್ರಮ ನಿರಂತರವಾಗಿ ಮುಂದುವರೆಸಲು ನಿರ್ಧರಿಸಿದೆ. ಮುರುಡೇಶ್ವರದಲ್ಲಿ ಹೆಚ್ಚಿನ ಪ್ರವಾಸೋದ್ಯಮ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಇನ್ನೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಜಿ.ಪಂ. ಸಿಇಒ ಈಶ್ವರ ಕಾಂದೂ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ಭಟ್ಕಳ ಉಪ ವಿಭಾಗಾಧಿಕಾರಿ ಡಾ.ನಯನಾ, ಭಟ್ಕಳ ತಹಶೀಲ್ದಾರ್ ತಿಪ್ಪೇಸ್ವಾಮಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ್, ಮಾವಳ್ಳಿ ಗ್ರಾ.ಪಂ. ಆಧ್ಯಕ್ಷೆ ನಾಗರತ್ನ ಕೊಗ್ಗ , ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗ, ಮುರ್ಡೇಶ್ವರದ ಗ್ರಾಮೀಣ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಸ್. ಕಾಮತ್ ಉಪಸ್ಥಿತರಿದ್ದರು.