ಉಡುಪಿ ಮೂಡುಬೆಳ್ಳೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು
ಉಡುಪಿ-ಮೂಡುಬೆಳ್ಳೆಯ10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯ ಪಳ್ಳಿ ದಾದಬೆಟ್ಟು ಎಂಬಲ್ಲಿ ಬುಧವಾರ ಸಂಭವಿಸಿದೆ.ಪಳ್ಳಿ ದಾದಬೆಟ್ಟು ಜಯರಾಮ ಆಚಾರ್ಯ ಮತ್ತು ಚಂದ್ರಿಕಾ ಅವರ ಪುತ್ರಿ ಭಾಗ್ಯಶ್ರೀ (16) ಮೃತ ದುರ್ದೈವಿ.
ಈಕೆ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ.
ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಈಕೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತೆಂದು ತಿಳಿದುಬಂದಿದೆ. ಭಾಗ್ಯಶ್ರೀ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಶಿಕ್ಷಕರು, ವಿದ್ಯಾರ್ಥಿ ವೃಂದದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಗೌರವಾರ್ಥ ಇಂದು ಶಾಲೆಗೆ ರಜೆ ನೀಡಲಾಗಿತ್ತು.