ಭಟ್ಕಳ-ಶ್ರೀ ವೆಂಕಟೇಶ್ವರ ಹೆಸರಿನ ಪರ್ಶಿನ್ ಬೋಟೊಂದರಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನೇತ್ರಾಣೆ ದ್ವೀಪದ ಸಮೀಪ ನಡೆದಿದೆ.
ಮೃತರನ್ನು ಭಟ್ಕಳ ತಾಲೂಕಿನ ಮಾವಿನಕುರ್ವೆ ಬೆಳ್ನಿ ನಿವಾಸಿ ಮಾದೇವ ನಾಗಪ್ಪ ಮೊಗೇರ (61) ಎಂದು ಗುರುತಿಸಲಾಗಿದೆ. ಇವರು ಮೂಲತ ಮುಂಡಳ್ಳಿ, ಮೊಗರಕೇರಿ ನಿವಾಸಿಯಾಗಿದ್ದು,ಕಳೆದ ಕೆಲ ವರ್ಷಗಳಿಂದ ಬೆಳ್ನಿಯಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿದ್ದರು. ಮೃತರು ಹೆಂಡತಿ, ಮೂವರು ಹೆಣ್ಣು, ಒಂದು ಗಂಡು ಸೇರಿದಂತೆ ನಾಲ್ವರು ಮಕ್ಕಳು, ಬಂದುಬಳಗವನ್ನು ಅಗಲಿದ್ದಾರೆ. ಇವರು ಕಳೆದ ನ.10ರಂದು ಬೆಳಗ್ಗೆ ಇತರ 20 ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದು, ಮೀನಿಗೆ ಬಲೆ ಬಿಡುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಮೃತರ ಶವ ಭಟ್ಕಳದಿಂದ ಸುಮಾರು 20 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಶನಿವಾರ ಸಂಜೆ ಪತ್ತೆಯಾಗಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಮೃತರ ಮಗ ಮಣಿಕಂಠ ಮೊಗೇರ್ ದೂರು ನೀಡಿದ್ದು .ಪ್ರಕರಣ ದಾಖಲಿಸಿಕೊಂಡಿರುವ ಪಿಎಸೈ ಪರಮಾನಂದ ಕೊಣ್ಣೂರ ತನಿಖೆ ನಡೆಸಿದ್ದಾರೆ.