ಶಿರಸಿ-ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಉಷಾ ಹೆಗಡೆ ಅವರಿಗೆ ಕಾರವಾರ ಜಿಲ್ಲಾ ನ್ಯಾಯಾಲಯ 1 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 5 ಸಾವಿರ ರೂ ದಂಡವನ್ನು ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.
ಬಿಜೆಪಿ ಮುಖಂಡರಾಗಿದ್ದ ಅವರು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಜಿಲ್ಲಾ ಪಂಚಾಯತ ಸಭೆಗಳಲ್ಲಿ ಸಹ ಸಾಕಷ್ಟು ಅಬ್ಬರದೊಂದಿಗೆ ಮಾತನಾಡಿ ಪ್ರತಿಭಟನೆಗಳ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದ್ದರು. ಆದರೆ, ಜಿಲ್ಲಾ ಪಂಚಾಯತ ಸದಸ್ಯೆ ಆಗುವ ಮುನ್ನ ಅವರು ಶ್ರೀನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಜನಪ್ರತಿನಿಧಿ ಆಗಿ ಆಯ್ಕೆಯಾದ ನಂತರ ಅಂಗನವಾಡಿ ಕಾರ್ಯಕರ್ತೆ ಹುದ್ದೆ ತ್ಯಜಿಸಿರಲಿಲ್ಲ.
2011ರಿಂದ 2012ರವರೆಗೆ ಅವರು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಹಾಗೂ ಶ್ರೀನಗರ ಅಂಗನವಾಡಿ ಕಾರ್ಯಕರ್ತೆ ಎಂಬ ಎರಡು ಹುದ್ದೆಗಳಿಂದ ಗೌರವ ಹಣ ಪಡೆಯುತ್ತಿದ್ದರು. ಜನಪ್ರತಿನಿಧಿ ಆದ ನಂತರವೂ ಸರ್ಕಾರಿ ನೌಕರ ಹುದ್ದೆಯಲ್ಲಿ ಮುಂದುವರೆದು ಸರ್ಕಾರಿ ಬೊಕ್ಕಸಕ್ಕೆ 88630 ರೂ ವಂಚಿಸಿದ ಬಗ್ಗೆ ಅವರ ವಿರುದ್ಧ ದೂರು ದಾಖಲಾಗಿತ್ತು.
ಅಂಗನವಾಡಿ ಕರ್ತವ್ಯಕ್ಕೆ ಹಾಜರಾಗದೇ ಇದ್ದರೂ ದಾಖಲೆಗಳಲ್ಲಿ ಹಾಜರಾಗಿರುವ ಬಗ್ಗೆ ಸಹಿ ಹಾಕಿದ್ದರು. ನಕಲಿ ದಾಖಲೆಗಳನ್ನು ಸೃಷ್ಠಿಸಿದ ಬಗ್ಗೆ ಅವರ ವಿರುದ್ಧ ಇಬ್ರಾಹಿಂ ನಬಿಸಾಬ್ ಎಂಬಾತರು ಲೋಕಾಯುಕ್ತ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ್ ಇದೀಗ ತಮ್ಮ ತೀರ್ಪು ಪ್ರಕಟಿಸಿದ್ದಾರೆ.