ಭಟ್ಕಳ: ಜಿಲ್ಲೆಯ ಭಾವ ಕವಿ ಉಮೇಶ ಮುಂಡಳ್ಳಿ ಅವರ “ತಿಂಗಳ ಬೆಳಕು” ಕೃತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.ಎಪ್ಪತ್ತಾರನೇ ಗಣರಾಜ್ಯೋತ್ಸವದಂದು ರವಿವಾರ ಶ್ರೀ ಕ್ಷೇತ್ರದಲ್ಲಿ ಹೆಗ್ಗಡೆಯವರು “ತಿಂಗಳ ಬೆಳಕು” ಲೋಕಾರ್ಪಣೆ ಗೊಳಿಸಿ ಸಾಹಿತ್ಯ ಕ್ಷೇತ್ರ ಮನಸ್ಸಿಗೆ ಮುದ ,ನೀಡುವಂತದ್ದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂತ ಉದ್ದೇಶ ಇರುವಂತದ್ದು. ಈ ಹನಿ ಕವನಗಳು ಹಿರಿದಾದ ಅರ್ಥವನ್ನು ನೀಡುವ ಮೂಲಕ ಬದುಕಿಗೆ ಸಾರ್ಥಕ ಸಂದೇಶ ನೀಡುತ್ತದೆ ಎಂದರು. ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಲಭಿಸಲಿ ಎಂದು ಮುಂಡಳ್ಳಿ ಅವರಿಗೆ ಶುಭಾಶೀರ್ವಾದ ನೀಡಿದರು.
ಚಂದಿರನನ್ನು ಸಂಕೇತವಾಗಿ ಇಟ್ಟುಕೊಂಡು ಸಮಾಜದ ಆಗುಹೋಗುಗಳ ಬಗ್ಗೆ ಮುಂಡಳ್ಳಿ ಅವರು ಪ್ರತಿ ನಿತ್ಯವು ಬರೆದು ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿದ್ದ ನೂರಕ್ಕೂ ಹೆಚ್ಚಿನ ಹನಿ ಕವಿತೆಗಳನ್ನು ಒಳಗೊಂಡ, ಹೆಗ್ಗಡೆಯವರ ಶುಭಾರ್ಶಿವಾದ ಇರುವ ತಿಂಗಳ ಬೆಳಕು ಕೃತಿಯು ಮರು ಮುದ್ರಣಗೊಂಡಿದ್ದು ಶರಣು ದುರ್ಗಾ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವ ಹನ್ನೊಂದನೇ ಕೃತಿಯಾಗಿದೆ.
ನಾಡಿನ ಹಿರಿಯ ಕವಿಗಳು ಬರಹಗಾರರು ಪತ್ರಕರ್ತರು ಆದ ಶ್ರೀ ವಿ.ಬಿ.ಅರ್ತಿಕಜೆಯವರು ಕೃತಿಗೆ ಬೆನ್ನುಡಿ ಬರೆದಿದ್ದು, ಉದಯವಾಣಿ ಉಪಸಂಪಾದಕರಾಗಿದ್ದ ದಿವಂಗತ ಸೀತಾಲಕ್ಷ್ಮೀ ಕರ್ಕಿಕೋಡಿಯವರಿಗೆ ಅರ್ಪಣೆ ಮಾಡಲಾದ ಕೃತಿಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಿಂಗಳ ಬೆಳಕು ಬಿಡುಗಡೆ ಸಂಧರ್ಭದಲ್ಲಿ ಕವಿಗಳಾದ ಉಮೇಶ ಮುಂಡಳ್ಳಿ ,ವೆಂಕಟಾಪುರದ ಯಕ್ಷ ಚೌಡೇಶ್ವರಿ ದೇವಾಲಯದ ಮುಖ್ಯಸ್ಥರಾದ ಶ್ರೀಧರ ನಾಯ್ಕ, ಮಾರುತಿ ನಾಯ್ಕ ಹಾಜರಿದ್ದರು.