*ಅಕ್ರಮ ಟೋಲ್ ಸಂಗ್ರಹ ವಿರೋಧಿಸಿ ಸಂಸದ ನಳಿನ್ ಕುಮಾರ್ ಟ್ವೀಟ್’ನ ಕಟೌಟ್ ಅನಾವರಣ*
ಸುರತ್ಕಲ್:
ಜಾಲತಾಣ ಟ್ವೀಟರ್ ಮೂಲಕ ಮಾಹಿತಿ ನೀಡಿ ‘ಕೇಂದ್ರ ಭೂಸಾರಿಗೆ ಸಚಿವರು ಹಾಗೂ ಪ್ರಧಾನಿಗಳಿಗೆ ಧನ್ಯವಾದ ಸಲ್ಲಿಸಿ ಒಂದು ವಾರ ಉರುಳಿತು ಆದೇಶ ಜಾರಿಯಾಗಿ ಅಕ್ರಮ ಟೋಲ್ ಗೇಟ್ ಮುಚ್ಚುವುದು ಯಾವಾಗ ನಳಿನಣ್ಣಾ..? ಎಂಬ ತಲೆ ಬರಹದೊಂದಿಗೆ ಸಂಸದರು ಮಾಡಿದ ಟ್ವೀಟ್’ನ ಕಟೌಟ್’ನ್ನು ಟೋಲ್ ಸಂಗ್ರಹ ಕೇಂದ್ರ ಪಕ್ಕದ ಧರಣಿ ಸ್ಥಳದಲ್ಲಿ ಸೋಮವಾರ ಅನಾವರಣ ಗೊಳಿಸಲಾಗಿದೆ.
ಟೋಲ್ ಸಂಗ್ರಹ ವಿರೋಧಿಸಿ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿಯ 25ನೇ ದಿನವಾದ ಇಂದು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಟ್ವೀಟ್’ನ ಕಟೌಟ್ ಅನಾವರಣಗೊಳಿಸಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ನಿನ್ನೆಯ ದಿವಸ ಮೂಡಿಗೆರೆ ಕ್ಷೇತ್ರದಲ್ಲಿ ಬೆಳಿಗ್ಗೆ ಆನೆ ತುಲಿತಕ್ಕೆ ಒಳಗಾಗಿ ಮತಪಟ್ಟ ಸ್ಥಳಕ್ಕೆ ಸಾಯಂಕಾಲ ಭೇಟಿ ನೀಡಲು ಮುಂದಾದ ಶಾಸಕರಿಗೆ ಜನ ಘೇರಾವ್ ಹಾಕಿ ಕಳಿಸಿದ್ದು ಅಲ್ಲದೆ ಇತ್ತೀಚೆಗೆ ಸುಳ್ಯದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರ ಕಾರು ಅಲ್ಲಾಡುವುದನ್ನು ಕೂಡಾ ನಾವು ನೋಡಿದ್ದೇವೆ, ಅದೇ ರೀತಿ ಈಗ ಅವರ ಕುರ್ಚಿ ಕೂಡ ಅಲ್ಲಾಡುತ್ತಿದೆ ಮುಂದೊಂದು ದಿನ ಟೋಲ್ ಗೇಟ್ ಮುಂದೆಯೂ ಈ ಪರಿಸ್ಥಿತಿ ಅವರಿಗೆ ಬರಲಿದೆ ಎಂದರು.
ಸುರತ್ಕಲ್ ಟೋಲ್ ಗೇಟ್ ರದ್ದಾಗಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ರವರು, ಕಳೆದ ಒಂದು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಯವರಿಗೆ ಅಭಿನಂದನೆಗಳನ್ನು ಕೋರಿ ಟ್ವೀಟ್ ಮಾಡಿರುತ್ತಾರೆ, ಹಾಗಿರುವಾಗ ಟ್ವೀಟ್’ನ ಕಟೌಟ್ ಸ್ಥಾಪಿಸುವ ಮೂಲಕ ಅವರ ಈ ಸುಳ್ಳಿನ ಮಹಾಪರ್ವದ ಸಾಧನೆಯ ಶಿಖರವನ್ನು ಸಮಾಜದ ಮುಂದೆ ಅನಾವರಣ ಗೊಳಿಸಿದ್ದೇವೆ, ಇನ್ನಾದರೂ ಅವರಿಗೆ ನಾಚಿಕೆಯಾಗಿ ಜನರಿಗೆ ನೀಡಿದ ಭರವಸೆಗಳನ್ನು ಉಳಿಸುವ ಪ್ರಯತ್ನ ಮಾಡಲಿಕ್ಕಾಗಿ ಶುಭ ಹಾರೈಸುತ್ತಿದ್ದೇವೆ ಎಂದು ಟೋಲ್ ವಿರೋಧಿ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ವ್ಯಂಗವಾಡಿದರು.
ಸ್ಥಳೀಯ ಶಾಸಕರು ಹಾಗೂ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ವಿವಿಧ ಸಂಘಟನೆಗಳ ಮುಖಂಡರು ಸಾರ್ವಜನಿಕರು ಟೋಲ್ ವಿರೋಧಿ ಹೋರಾಟವನ್ನು ಬೆಂಬಲಿಸುತ್ತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಅದ್ದಿ ಬೊಳ್ಳೂರು