ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಇಡಬ್ಲ್ಯುಎಸ್ ಮೀಸಲಾತಿ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯರ ಪೀಠ ಎತ್ತಿ ಹಿಡಿದಿದೆ.
ಆದರೆ ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಾಧೀಶರು ಮೀಸಲಾತಿಯ ವಿರುದ್ಧ ತೀರ್ಪು ನೀಡಿದ್ದಾರೆ.
ಪೀಠದಲ್ಲಿದ್ದ ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಬೇಲಾ ಎಂ. ತ್ರಿವೇದಿ ಮತ್ತು ನ್ಯಾ. ಪರ್ದಿವಾಲಾ ಮೀಸಲಾತಿ ಪರವಾಗಿ ತೀರ್ಪು ನೀಡಿದರೆ, ನ್ಯಾಯಮೂರ್ತಿ ರವೀಂದ್ರ ಭಟ್ , ಸಿಜೆಐ ಯುಯು ಲಲಿತ್ ಅವರು ಮೀಸಲಾತಿ ವಿರುದ್ಧವಾಗಿ ತೀರ್ಪು ನೀಡಿದ್ದಾರೆ.
ನ್ಯಾ. ರವೀಂದ್ರ ಭಟ್ ಅವರು ಬಹುಮತದ ತೀರ್ಪಿಗೆ ಅಸಮ್ಮತಿ ವ್ಯಕ್ತಪಡಿಸಿ ಭಿನ್ನ ತೀರ್ಪು ನೀಡಿದ್ದಾರೆ.
ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು, ಆರ್ಥಿಕ ಆಧಾರದ ಮೇಲೆ ಮೀಸಲಾತಿ ಒದಗಿಸುವುದರಿಂದ ಮೂಲಭೂತ ರಚನೆ ಅಥವಾ ಭಾರತ ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ ಎಂದು ತೀರ್ಪು ನೀಡಿದರು.
ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರು, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಬೇಲಾ ತ್ರಿವೇದಿ ಅವರ ತೀರ್ಪುಗಳಿಗೆ ನನ್ನ ಸಹಮತವಿದೆ. ಇಡಬ್ಲ್ಯೂಎಸ್ ತಿದ್ದುಪಡಿಯನ್ನು ನಾನು ಎತ್ತಿಹಿಡಿಯುವೆ ಎಂದು ತೀರ್ಪಿನಲ್ಲಿ ತಿಳಿಸಿದರು.
ನ್ಯಾ. ಪರ್ದಿವಾಲಾ ಅವರು, ಮೀಸಲಾತಿಯನ್ನು ಪಟ್ಟಭದ್ರ ಹಿತಾಸಕ್ತಿಯಾಗಲು ಬಿಡಬಾರದು. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಕೊನೆಗೊಳಿಸಬೇಕಿದೆ. ಆಂದೋಲನ 7 ದಶಕಗಳ ಹಿಂದೆ ಪ್ರಾರಂಭವಾಗಿದ್ದು ಅಂತರವನ್ನು ಕಡಿಮೆ ಮಾಡಲು ದೀರ್ಘಕಾಲೀನ ಅಭಿವೃದ್ಧಿ ಮತ್ತು ಶಿಕ್ಷಣ ಸಹಾಯ ಮಾಡಿದೆ ಎಂದು ತೀರ್ಪಿನಲ್ಲಿ ತಿಳಿಸಿದರು.