ಬಿಜೆಪಿಯ ಧೀಮಂತ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಘೋಷಣೆ
ದೆಹಲಿ-1990 ರ ದಶಕದ ಆರಂಭದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕಾಗಿ ರಥಯಾತ್ರೆ ಮೂಲಕ ಪಕ್ಷವನ್ನು ಸಂಘಟಿಸಿದ ಬಿಜೆಪಿ ಧೀಮಂತ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಲಾಗಿದೆ.
ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಅಭಿವೃದ್ದಿಗೆ ಅಡ್ವಾಣಿಯವರ ಪಾತ್ರ ಬಹಳ ದೊಡ್ಡದು, ಭಾರತದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಅವರೂ ಒಬ್ಬರು ಎಂದು ಪ್ರತಿಕ್ರಿಯಿಸಿದ್ದಾರೆ.
ಅಡ್ವಾಣಿಯವರಿಗೆ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸಿರುವುದಾಗಿ ಹೇಳಿದ ಮೋದಿಯವರು, ಅಡ್ವಾಣಿಯವರು ತಳಮಟ್ಟದಿಂದ ಹಿಡಿದು ಈ ದೇಶದ ಉಪಪ್ರಧಾನಿಯವರೆಗೆ ಕೆಲಸ ಮಾಡಿದ ಆದರ್ಶಪ್ರಾಯರಾಗಿದ್ದಾರೆ ಎಂದರು.
ಕರಾಚಿಯಲ್ಲಿ ಜನಿಸಿದ ಎಲ್‌ಕೆ ಅಡ್ವಾಣಿ ದೇಶ ವಿಭಜನೆಯ ನಂತರ ಬಾಂಬೆಯಲ್ಲಿ ನೆಲೆಸಿದರು. 1941 ರಲ್ಲಿ ಹದಿನಾಲ್ಕನೆಯ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ಗೆ ಸೇರಿದ್ದರು. 1951 ರಲ್ಲಿ ಬಿಜೆಪಿ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಸ್ಥಾಪಿಸಿದ್ದ ಭಾರತೀಯ ಜನಸಂಘದ ಸದಸ್ಯರಾದರು.
1970 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಯ ಸದಸ್ಯರಾದ ಅಡ್ವಾಣಿ 1989 ರವರೆಗೆ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದರು. 1989 ರಲ್ಲಿ, ಅವರು ಮೊದಲ ಬಾರಿಗೆ ಲೋಕಸಭಾ ಸದಸ್ಯರಾದರು. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು.