ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದ್ದಕ್ಕೆ ತನ್ನ ಹಿಂದೂ ಗೆಳತಿಯನ್ನು 4ನೇ ಮಹಡಿಯಿಂದ ಎಸೆದು ಕೊಲೆಗೈದ ಮುಸ್ಲಿಂ ಪ್ರಿಯಕರ
*ಲಕ್ನೋ: ತನ್ನನ್ನು ಮದುವೆಯಾಗುವಂತೆ ಕೇಳಿದ್ದಕ್ಕೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿಯನ್ನ ಭೀಕರವಾಗಿ ಹತ್ಯೆ ಮಾಡಿದ ದೆಹಲಿಯ ಘಟನೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಇದೀಗ ಉತ್ತರ ಪ್ರದೇಶದಲ್ಲಿ ಅಂತಹದ್ದೇ ಘಟನೆಯೊಂದು ನಡೆದಿರುವುದು ಪೊಲೀಸರ ನಿದ್ದೆಗೆಡಿಸಿದೆ.*
*ಮುಸ್ಲಿಂ ಯುವಕನೊಬ್ಬ ತನ್ನ 19 ವರ್ಷದ ಹಿಂದೂ ಗೆಳತಿ ಮತಾಂತರಗೊಳ್ಳಲು ನಿರಾಕರಿಸಿದ್ದರಿಂದ ಆಕೆಯನ್ನು ಕಟ್ಟಡದ 4ನೇ ಮಹಡಿಯಿಂದ ಎಸೆದು ಕೊಂದಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.*
*ಆರೋಪಿ ಸೂಫಿಯಾನ್ ಹಾಗೂ ನಿಧಿ ಗುಪ್ತ (19) ದುಬಗ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸಿಸುತ್ತಿದ್ದರು. ನಿಧಿ ಬ್ಯೂಟಿಷಿಯನ್ ತರಬೇತಿ ಪಡೆದಿದ್ದಳು. ಕಳೆದ ಎರಡು ತಿಂಗಳಿನಿಂದ ಇಬ್ಬರು ಸಂಬಂಧ ಹೊಂದಿದ್ದರು.*
*ಸೂಫಿಯಾನ್ ನಿಧಿಗೆ ಮೊಬೈಲ್ ಸಹ ಕೊಡಿಸಿದ್ದ. ಕರೆ ಮಾಡಿದಾಗೆಲ್ಲಾ, ಸಂದೇಶಗಳನ್ನು ಕಳಿಸುವಾಗ ಆಕೆಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಬ್ರೈನ್‌ವಾಶ್ ಮಾಡುತ್ತಿದ್ದ. ಈ ವಿಷಯ ತಿಳಿದ ನಿಧಿ ಪೋಷಕರು ಸೂಫಿಯಾನ್ ಮತ್ತು ಅವನ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. ಬಲವಂತವಾಗಿ ಮತಾಂತಗೊಳಿಸಲು ಪ್ರಯತ್ನಿಸುತ್ತಿದ್ದರಿಂದ ನಿಧಿಯನ್ನು ಅಜ್ಜಿ ಮನೆಗೆ ಕಳುಹಿಸಿದ್ದರು. ಇದರಿಂದ ಕೆಲ ದಿನಗಳಿಂದ ಸೂಫಿಯಾನ್‌ನೊಂದಿಗೆ ಮಾತನಾಡುವುದು ನಿಂತಿತ್ತು. ಆದಾಗ್ಯೂ ಸೂಫಿಯಾನ್ ದುರ್ವರ್ತನೆಯಿಂದ ಪೋಷಕರು ದೂರು ನೀಡಿದ್ದರು. ಬಳಿಕ ರಾಜಿ ಮಾಡಿಕೊಳ್ಳಲಾಗಿತ್ತು. ಆದರೆ ಭಾನುವಾರ ನಿಧಿ ತನ್ನ ಮನೆಯ ನಾಲ್ಕನೇ ಮಹಡಿಗೆ ಬಂದಾಗ ಬಾಲ್ಕನಿಯಿಂದ ಎಸೆದಿದ್ದಾನೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.*
*ಬಳಿಕ ರಕ್ತದ ಮಡುವಿನಲ್ಲಿದ್ದ ನಿಧಿಯನ್ನು ಇಲ್ಲಿನ ಕಿಂಗ್‌ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಗಂಭೀರ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.*
*ಲಕ್ನೋ ಪೊಲೀಸರು ಕೊಲೆ ಮತ್ತು ಬಲವಂತದ ಮತಾಂತರಕ್ಕೆ ಸಂಬಂಧಿಸಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಭಾನುವಾರದಿಂದ ಸುಫಿಯಾನ್ ಮತ್ತು ಕುಟುಂಬ ಪರಾರಿಯಾಗಿದೆ. ಕುಟುಂಬವನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.*