ವಿಶ್ವಕಪ್ 2023ರ ಪಂದ್ಯಾವಳಿಯ
ಫೈನಲ್ ಪಂದ್ಯ ಭಾರತದ ವಿರುದ್ದ ಗೆದ್ದು ವಿಶ್ವಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡ
ಅಹಮದಾಬಾದ್: ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ನಿಗದಿತ ಓವರ್‌ಗಳಲ್ಲಿ 240 ರನ್ ಗಳಿಗೆ ಆಲೌಟ್ ಆಗಿತ್ತು.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ (137 ರನ್ 120 ಎಸೆತ 15 ಬೌಂಡರಿ, 4ಸಿಕ್ಸರ್) ಅವರ ಶತಕದ ನೆರವಿನಿಂದ ಆತಿಥೇಯ ಭಾರತ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಲೋಕದ ಅಧಿಪತಿ ಎಂಬುದನ್ನು ಸಾಬೀತು ಮಾಡಿದೆ.
ಭಾರತ ನೀಡಿದ 241 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ 43 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಅಂತರದಲ್ಲಿ ಸುಲಭವಾಗಿ ವಿಜಯ ಸಾಧಿಸಿತು. ಕೇವಲ 47 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಸಿಸ್ಗೆ ಟ್ರಾವಿಸ್ ಹೆಡ್ ಆಪತ್ಬಾಂಧವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್, ಆಸಿಸ್ಗೆ ಸುಲಭ ಗೆಲುವು ತಂದುಕೊಟ್ಟರು.
ಇನ್ನು ಭಾರತೀಯ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಹೆಡ್, ಅಕ್ಷರಶಃ ಅಮೋಘ ಆಟವಾಡಿದರು. ಈಮೂಲಕ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉತ್ತಮ ಪ್ರದಶನ ನೀಡುವ ಮೂಲಕ ಭಾರತವನ್ನು ಬಗ್ಗು ಬಡಿದರು.
ಲಬುಶೇನ್ ಸಾಥ್: ಇತ್ತ ಹೆಡ್ ಜತೆಗೆ ಮಾರ್ನಸ್ ಲಬುಶೇನ್ ಉತ್ತಮ ಸಾಥ್ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ ಅಜೇಯ 58 ರನ್ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಉಳಿದಂತೆ ಗ್ಲೇನ್ ಮ್ಯಾಕ್ಸ್ವೆಲ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.