ಕಲಾ ಪರಂಪರೆಗೆ ಸಾಂಸ್ಕೃತಿಕ ಗೌರವ ಕೊಟ್ಟಾಗ ಕಲಾ ಸಾಧಕನಾಗಲು ಸಾಧ್ಯ: ಚುಂಚಶ್ರೀ ಅಭಿಮತ
ನಾಗಮಂಗಲ.ನ:- ಬಿತ್ತಿದಂತೆ ಬೆಳೆ ನೂಲಿನಂತೆ ದಾರ ಎಂಬ ಹಿರಿಯರ ಮಾತಿನಂತೆ ಕಲೆಯನ್ನು ಆರಾಧಿಸುವ ಭಾವನೆ ಉಳ್ಳವರು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ ಎಂದು ಆದಿಚುಂಚನಗಿರಿ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಶ್ರೀಗಳು ನುಡಿದರು.
ಅವರು ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಕ್ಷೇತ್ರದಲ್ಲಿ 2 ದಿನಗಳ ಕಾಲ ನಡೆದ “ರಾಜ್ಯ ಮಟ್ಟದ ಚುಂಚಾದ್ರಿ ಕಲೋತ್ಸವ” ರಜತ ಮಹೋತ್ಸವದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಉತ್ತಮ ಗರಡಿಯಲ್ಲಿ ಪಳಗಿದವರು ಯಶಸ್ವಿಯಾಗುತ್ತಾರೆ ಉಳಿದವರು ಮತ್ತೆ ಪ್ರಯತ್ನಿಸಿದರೆ ಮುಂದಿನ ಸ್ಪರ್ಧೆಯಲ್ಲಿ ಸಾಧನೆಯ ಮೆಟ್ಟಿಲೇರುತ್ತಾರೆ. ವಿಶ್ವದ ಖ್ಯಾತ ವಿಜ್ಞಾನಿ ಐನ್ಸ್ಟೈನ್ ರವರ ಸಾಧನೆಯನ್ನು ಉಲ್ಲೇಖಿಸಿ ಪ್ರೋತ್ಸಾಹಕ ನುಡಿಗಳೊಂದಿಗೆ ಆಶೀರ್ವದಿಸಿದರು.
ನಾಗಮಂಗಲ ತಾಲೂಕಿನ ಶಾಸಕರಾದ ಕೆ ಸುರೇಶ್ ಗೌಡ ಕಲೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ನಮ್ಮ ಕಾಲದಲ್ಲಿ ಇಷ್ಟೆಲ್ಲಅವಕಾಶಗಳು ಸಿಗುತ್ತಿರಲಿಲ್ಲ ಈ ಯುಗದ ನಿಮಗೆ ಇಷ್ಟು ದೊಡ್ಡ ಮಟ್ಟದ ಅವಕಾಶಗಳು ದೊರೆತು ತಮ್ಮ ಕಲಾ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದೀರಿ, ನೀವೆಲ್ಲ ಪುಣ್ಯವಂತರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸ್ಪರ್ಧಾ ವಿಜೇತರ ವಿವರವನ್ನು ನೀಡಿದರು. 20 ಜಿಲ್ಲೆಗಳಿಂದ ಆಗಮಿಸಿ, 11 ವಿಭಾಗದಲ್ಲಿ ಭಾಗವಹಿಸಿದ್ದ ವಿಜೇತ ವಿದ್ಯಾರ್ಥಿಗಳನ್ನು ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಪ್ರಾಥಮಿಕ ವಿಭಾಗದಲ್ಲಿ ಬಿಜಿ ನಗರ ಮತ್ತು ಶಿವಮೊಗ್ಗ, ಪ್ರೌಢಶಾಲಾ ವಿಭಾಗದಲ್ಲಿ ಭದ್ರಾವತಿ ಹಾಗೂ ಪದವಿ ಪೂರ್ವ ವಿಭಾಗದಲ್ಲಿ ಶಿವಮೊಗ್ಗ ಶಾಖಾ ಮಠಗಳ ಶಾಲೆಗಳಿಗೆ ಸಮಗ್ರ ಪ್ರಶಸ್ತಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಟ್ರಸ್ಟ್ ನ ಆಡಳಿತ ಅಧಿಕಾರಿ ಡಾ. ಎ ಟಿ ಶಿವರಾಮು, ವಿವಿಧ ಭಾಗಗಳಿಂದ ಬಂದಿದ್ದ ತೀರ್ಪುಗಾರರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಇತರರಿದ್ದರು.
ದೇವಲಾಪುರ ಜಗದೀಶ್ ನಾಗಮಂಗಲ