ಗುರು ಮಂಟೇಶ್ವರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ:ಜನರಲ್ಲಿ ಹೆಚ್ಚಿದ ಆತಂಕ
ಕೆಲೂರ:ಸಾಮಾನ್ಯವಾಗಿ ಮಳೆ ಬಂದ್ರೆ ನದಿ ತೀರದ ಗ್ರಾಮಸ್ಥರಿಗೆ ಮೊಸಳೆಗಳು ಬಂದು ಆತಂಕ ಸೃಷ್ಟಿಸೋದು ಕಾಮನ್. ಆದ್ರೆ ಈ ಒಂದು ಗ್ರಾಮದಲ್ಲಿ ಇದೀಗ ಊರ ಪಕ್ಕ ನದಿ ಇರಲಿ, ಇರದೇ ಇರಲಿ, ಊರಿನ ಕೆರೆಯಲ್ಲಿ ಏಕಾಏಕಿ ಮೊಸಳೆ ಪತ್ತೆಯಾಗುತ್ತಿದ್ದು, ಇದೀಗ ಜನರಲ್ಲಿ ಇನ್ನಿಲ್ಲದ ಆತಂಕಕ್ಕೆ ಕಾರಣವಾಗಿದೆ.
ಒಂದೆಡೆ ಊರುಗಳ ಕೆರೆಯಲ್ಲಿ ಏಕಾಏಕಿ ಕಂಡು ಬರುತ್ತಿರೋ ಮೊಸಳೆಗಳು, ಮತ್ತೊಂದೆಡೆ ಮೊಸಳೆಗಳನ್ನ ಕಂಡು ಆತಂಕಗೊಳ್ಳುವ ಜನರು. ಅಂದಹಾಗೆ ಇಂತಹವೊಂದು ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ. ಹೌದು ಸಾಮಾನ್ಯವಾಗಿ ನದಿ ದಡದ ಗ್ರಾಮಗಳಲ್ಲಿ ಕಂಡು ಬರುತ್ತಿದ್ದ ಮೊಸಳೆಗಳು ಇದೀಗ ನದಿ ದಡ ಬಿಟ್ಟು ದೂರ ಇರುವ ಗ್ರಾಮಗಳಲ್ಲೂ ಕಂಡು ಬರುತ್ತಿವೆ. ಇತ್ತೀಚಿಗೆ ನಿರಂತರವಾಗಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ಬರುವ ನೀರು ಕೆರೆಗಳಿಗೆ ಬಂದು ಸೇರುತ್ತಿರೋದ್ರಿಂದ ಅದರೊಟ್ಟಿಗೆ ಇದೀಗ ಮೊಸಳೆಗಳು ಕಂಡು ಬರುತ್ತಿವೆ.
ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ವಿಶಾಲ ಕೆರೆಯಲ್ಲಿ ಒಂದೂವರೆ ತಿಂಗಳ ಹಿಂದೆ ಪ್ರತ್ಯಕ್ಷವಾಗಿದ್ದ ಮೊಸಳೆ ಮತ್ತೆ ಅದೇ ಕರೆಯಲ್ಲಿ ಕಂಡುಬಂದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಳೆದ ತಿಂಗಳು ಇದೇ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ ವಾಗಿತ್ತು ನಂತರ ಕಾಣಿಸಿಕೊಂಡಿರಲಿಲ್ಲ. ಶನಿವಾರ ಬೆಳಗ್ಗೆ ಮೊಸಳೆ ಈಜುತ್ತಿರುವುದನ್ನು ಖಚಿತಪಡಿಸಿಕೊಂಡ ಗ್ರಾಮಸ್ಥರು ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಈ ಹಿಂದೆ ಸತತ 12ದಿನ ಕಾರ್ಯಾಚರಣೆ ನಡೆಸಿದರೂ ಮೊಸಳೆ ಬಲೆಗೆ ಬಿದ್ದಿರಲಿಲ್ಲ. ಆದರೆ ಒಂದೂವರೆ ತಿಂಗಳ ನಂತರ ಮತ್ತೆ ಮೊಸಳೆಪ್ರತ್ಯಕ್ಷವಾಗಿದೆ. ಅರಣ್ಯ ಇಲಾಖೆ ಬಲೆ ಹಾಕಿ ದಡದ ಮೇಲೆ ಕಾಯುತ್ತ ಕುಳಿತುಕೊಳ್ಳದೆ ಮೊಸಳೆ ಹಿಡಿಯುವಲ್ಲಿ ಬೇರೆ ಉಪಾಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.