ಮುರುಡೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ವಸ್ತ್ರ ಸಂಹಿತೆಯನ್ನು ಜಾರಿ ಮಾಡುವಂತೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ಸಂಘಟನೆಗಳಿಂದ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ
ಭಟ್ಕಳ-ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ ಸಾತ್ವಿಕ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ಇಂದು ಶ್ರೀ ಮುರುಡೇಶ್ವರ ದೇವಸ್ಥಾನದ ಆಡಳಿತ ವರ್ಗದವರಿಗೆ ಮನವಿಯನ್ನು ನೀಡಲಾಯಿತು.
ಶ್ರೀ ಮುರುಡೇಶ್ವರ ದೇವಸ್ಥಾನವು ಉತ್ತರಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲೊಂದಾಗಿದೆ. ಭಕ್ತರು ಬೇಡಿದ್ದನ್ನು ನೀಡುತ್ತಾಳೆಂಬ ನಂಬಿಕೆ ಇರುವ ಶ್ರೀ ಮುರುಡೇಶ್ವರ ದೇವಸ್ಥಾನವು ಒಂದು ಕಾರಣಿಕ ಸ್ಥಳವಾಗಿದ್ದು ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯವನ್ನು ನೀಡುವ ಪುಣ್ಯಕ್ಷೇತ್ರವಾಗಿದೆ. ಮುರುಡೇಶ್ವರದ ಅಸ್ತಿತ್ವದಿಂದ ಮುರುಡೇಶ್ವರ ನಗರ ಪಾವನವಾಗಿದೆ. ದೇವಸ್ಥಾನದ ಪಾವಿತ್ರ್ಯವನ್ನು ಜೋಪಾಸನೆ ಮಾಡಿದರೆ ಮಾತ್ರ ಅಲ್ಲಿರುವ ದೇವತ್ವದ ಅನುಭವವನ್ನು ಪಡೆಯಬಹುದು.
ಹಿಂದೂ ಸಂಸ್ಕೃತಿಯ ಪ್ರಕಾರ ಉಡುಪುಗಳನ್ನು ಧರಿಸುವುದರಿಂದ ಈಶ್ವರಿ ಚೈತನ್ಯದ ಲಾಭವಾಗುತ್ತದೆ ಮತ್ತು ದೇವತೆಯ ತತ್ವದ ಅನೂಭೂತಿ ಬರುತ್ತದೆ. ಪಾಶ್ಚಾತ್ಯ ಉಡುಪುಗಳನ್ನು ಧರಿಸುವುದರಿಂದ ಮತ್ತು ಕೂದಲೂ ಬಿಚ್ಚಿಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ವಿದೇಶಿ ಸಂಸ್ಕೃತಿಯ ರಜ-ತಮ ಪ್ರಧಾನ ಉಡುಪುಗಳಿಂದ ದೇವಸ್ಥಾನದ ಸಾತ್ವಿಕತೆಗೆ ಭಂಗ ಉಂಟಾಗಿ ಭಾವಿಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ.
ಅತ್ಯಂತ ಪವಿತ್ರ ಹಾಗೂ ಚೈತನ್ಯಮಯ ನಮ್ಮ ದೇವಸ್ಥಾನಗಳಲ್ಲಿ ಅವುಗಳ ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತರ ಆದ್ಯಕರ್ತವ್ಯವೇ ಆಗಿದೆ. ಅದುದರಿಂದ ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ ಭಕ್ತರು ಸಾತ್ವಿಕ ಉಡುಪುಗಳನ್ನು ಧರಿಸಿ ಬರಬೇಕೆಂಬ ನಿಯಮವನ್ನು ಹಾಕಿ ಅದರ ಪಾವಿತ್ರ್ಯವನ್ನು ಕಾಪಾಡಬೇಕಾಗಿ ಈ ಮೂಲಕ ಎಲ್ಲಾ ಶ್ರದ್ಧಾಳು ಮತ್ತು ಮಹಿಳೆಯರಿಗೆ ವಿನಂತಿಸಿಕೊಳ್ಳುತ್ತಿದ್ದೇವೆ. ಇಂತಹ ಧರ್ಮಜಾಗೃತಿಯ ಪ್ರಯತ್ನದಿಂದ ಶ್ರೀ ಮುರುಡೇಶ್ವರ ದೇವರ ಕೃಪೆಯು ನಿಶ್ಚಿತವಾಗಿಯೂ ನಮ್ಮೆಲ್ಲರ ಮೇಲಾಗುವುದು ಎಂದು ತಿಳಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಸೈನಿಕರು ಶ್ರೀ ಶ್ರೀಕಾಂತ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ಶ್ರೀ ಶ್ರೀನಿವಾಸ ನಾಯ್ಕ್, ಶ್ರೀ ದಿನೇಶ ನಾಯ್ಕ್, ಶ್ರೀ ಪಾಂಡುರಂಗ ನಾಯ್ಕ್, ಶ್ರೀ ಸಂತೋಷ್ ಆಚಾರ್ಯ, ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಜಯಂತ್ ನಾಯ್ಕ್, ಶ್ರೀ ರಾಜು ನಾಯ್ಕ್, ಶ್ರೀ ಮೋಹನ್ ನಾಯ್ಕ್ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಶರತ್ ಕುಮಾರ್ ನಾಯ್ಕ್, ಶ್ರೀ ಸಂತೋಷ ಭಟ್ಕಳ ಮುಂತಾದವರು ಉಪಸ್ಥಿತರಿದ್ದರು.