ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ.
ವಿಜಯಪುರ- ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತನ್ನಿಬ್ಬರು ಕರುಳ ಕುಡಿಗಳೊಂದಿಗೆ ತಾಯಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.
ತನ್ನಿಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯನ್ನು ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ರೇಣುಕಾ ಅಮೀನಪ್ಪ ಕೋನಿನ್ (26 ) ಹಾಗೂ ಹೆತ್ತವಳಿಂದಲೇ ನಾಲೆಗೆ ಎಸೆಯಲ್ಪಟ್ಟು ಹತ್ಯೆಯಾದ ದುರ್ಧೈವಿ ಹಸುಕಂದಮ್ಮಗಳನ್ನು ಯಲ್ಲವ್ವ (2) ಅಮೃತಾ (1) ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಗಂಡನ ಮನೆಯಲ್ಲಿ ಜಗಳವಾಡಿ, ತನ್ನಿಬ್ಬರು ಮಕ್ಕಳೊಂದಿಗೆ ರೇಣುಕಾ ಮನೆ ಬಿಟ್ಟು ಬಂದಿದ್ದಳು. ಕಾಣೆಯಾದ ಹೆಂಡತಿ ಮಕ್ಕಳನ್ನು ಅಮೀನಪ್ಪ ಹಾಗೂ ಕುಟುಂಬದವರು ಹುಡುಕಿದ್ದರೂ ಸಿಕ್ಕಿರಲಿಲ್ಲ.
ಸೋಮವಾರ ಮನಗೂಳಿ ಪೊಲೀಸ್ ಠಾಣೆಗೆ ಬಂದಿದ್ದ ಅಮೀನಪ್ಪ ತನ್ನ ಹೆಂಡತಿ-ಮಕ್ಕಳು ಕಾಣೆಯಾಗಿದ್ದಾರೆಂದು ದೂರು ನೀಡಿದ್ದ. ಮಂಗಳವಾರ ಕಾಲುವೆಯಲ್ಲಿ ರೇಣುಕಾ, ಓರ್ವ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ. ಇನ್ನೊಂದು ಮಗುವಿಗಾಗಿ ಪೊಲೀಸರು ಸ್ಥಳೀಯರ ನೆರವಿನಿಂದ ಮುಳುಗು ಈಜು ತಜ್ಞರ ಸಹಾಯದಿಂದ ಶೋಧಕಾರ್ಯ ನಡೆಸಿದ್ದಾರೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಮನಗೂಳಿ ಎಸೈ ಪರಶುರಾಮ, ಪರಿಶೀಲನೆ ನಡೆಸಿದ್ದು ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.