ಚೀನಾದಲ್ಲಿ ಕೋವಿಡ್ ಭಾರಿ ಪ್ರಮಾಣದಲ್ಲಿ ಹೆಚ್ಚಳ- ರಾಜ್ಯಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರ ಸೂಚನೆ
ಬೆಂಗಳೂರು: ನೆರೆಯ ಚೀನಾದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದು, ಎಲ್ಲ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ.
ಚೀನದಲ್ಲಿ ಕಂಡು ಬಂದಿರುವ ಬಿ 7 ತಳಿ ಭಾರತದಲ್ಲೂ 4 ಮಂದಿಯಲ್ಲಿ ಕಂಡು ಬಂದಿದ್ದರಿಂದ ಕಟ್ಟೆಚ್ಚರ ವಹಿಸಲಾಗಿದೆ.
ಚೀನ, ಜಪಾನ್, ಅಮೆರಿಕ, ದಕ್ಷಿಣ ಕೊರಿಯ, ಬ್ರೆಜಿಲ್ನಲ್ಲಿ ದಿಢೀರನೇ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಬುಧವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜತೆ ಸಭೆ ನಡೆಸಿದ ಬಳಿಕ ಮಾತನಾಡಿ, ಎಂಥದ್ದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಲು ಸೂಚಿಸಿದರು.
ಮುನ್ನೆಚ್ಚರಿಕಾ ಡೋಸ್ ಪಡೆಯುವಂತೆ ಸಲಹೆ ನೀಡಿದ್ದು, ಈಗಿನ ಚೀನ ಪರಿಸ್ಥಿತಿ ನಮ್ಮಲ್ಲಿ ಉದ್ಭವವಾದೀತು ಎಂದಲ್ಲ. ಆದರೆ ಆತಂಕ ಪಡುವುದಕ್ಕಿಂತ ಎಚ್ಚರ ವಹಿಸಿ ಎಂದರು ಸಚಿವರು. ಜನಸಂದಣಿ ಇರುವಲ್ಲಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾದುಕೊಳ್ಳಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ರ್ಯಾಂಡಮ್ ಟೆಸ್ಟ್ ನಡೆಸಲು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲೂ ಕಟ್ಟೆಚ್ಚರ
ಇತ್ತ ರಾಜ್ಯ ಸರಕಾರ ಕೂಡ ಮುನ್ನೆಚ್ಚರಿಕೆ ವಹಿಸಲು ಜನರಿಗೆ ಸಲಹೆ ನೀಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮೊದಲ ಹಂತದಲ್ಲಿ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಾಧ್ಯತೆ ಇದೆ. ಶೀಘ್ರವೇ ಕೋವಿಡ್ ಮುನ್ನೆಚ್ಚರಿಕೆ ಸಂಬಂಧ ಸರಕಾರವು ಮಾರ್ಗಸೂಚಿ ಹೊರಡಿಸಲಿದೆ.
ಕೋವಿಡ್ ಲಕ್ಷಣ ಪತ್ತೆಯಾದರೆ ಪರೀಕ್ಷಿಸಿ
ಕೆಮ್ಮು, ಜ್ವರ, ಶೀತ, ಗಂಟಲು, ತಲೆನೋವು ಸೇರಿದಂತೆ ಕೋವಿಡ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷಿಸುವುದು ಉತ್ತಮ ಎನ್ನುತ್ತಾರೆ ತಜ್ಞ ವೈದ್ಯರು.
ಬೂಸ್ಟರ್ ಪಡೆಯದಿದ್ದವರ ಮೇಲೆ ನಿಗಾ ರಾಜ್ಯದಲ್ಲಿ ಈವರೆಗೆ ಶೇ.20ರಷ್ಟು ಮಂದಿ ಮುನ್ನೆಚ್ಚರಿಕಾ ಡೋಸ್ ಪಡೆದಿದ್ದು, ಪಡೆಯದವರ ಮೇಲೆ ನಿಗಾ ವಹಿಸಲಾಗುವುದು.
ಡಾ| ಕೆ. ಸುಧಾಕರ್, ಆರೋಗ್ಯ ಸಚಿವ ಎಂದು ತಿಳಿಸಿದ್ದಾರೆ.