ಹೆಡ್ ಮಾಸ್ಟರ್ ನೇತೃತ್ವದಲ್ಲಿ ಪ್ರತಿದಿನ ಮಧ್ಯಾಹ್ನ ಬಾರ್‌ಲ್ಲಿ ಶಿಕ್ಷಕರ ಪಾರ್ಟಿ
ರಾಯಚೂರು -ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ಯಾಂಪಿನ ಪ್ರೌಢ ಶಾಲೆಯ ಶಿಕ್ಷಕರು ಪ್ರತಿದಿನ ಮಧ್ಯಾಹ್ನ ಬಾರ್‌ಗಳಲ್ಲಿ ಕುಳಿತು ಮತ್ತೇರಿಸಿಕೊಳ್ಳುತ್ತಿರುವ ಘಟನೆ ನಡೆದಿದೆ. ಸ್ವತಃ ಪೋಷಕರು ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ.
ಇನ್ನೂ ಮುಖ್ಯಗುರುಗಳ ನೇತೃತ್ವದಲ್ಲಿ ಈ ಪಾರ್ಟಿ ನಡೆಯುತ್ತದೆ ಎಂಬ ಆರೋಪ ಕೇಳಿಬಂದಿದೆ. ದೈಹಿಕ ಶಿಕ್ಷಕ ಚನ್ನಪ್ಪ ರಾಠೋಡ್, ಶಿಕ್ಷಕರಾದ ಲಿಂಗಪ್ಪ ಪೂಜಾರ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಎಂಬುವವರು ಸಹ ಬಾರ್‌ಗೆ ಹಾಜರಾಗುತ್ತಾರೆ ಎನ್ನಲಾಗಿದೆ. ಇವರು ಮಧ್ಯಾಹ್ನ ಊಟದ ಅವಧಿಯಲ್ಲಿ ಬಾರ್‌ಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಹೋದವರು ಎಷ್ಟೋತ್ತಾದರೂ ಬರುವುದೇ ಇಲ್ಲ. ಒಂದುವೇಳೆ ಬಂದರೂ ಸಹ ಅವರು ಪಾಠ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಎನ್ನಲಾಗಿದೆ.
ಶಿಕ್ಷಕರಾದವರೇ ಕುಡಿತಕ್ಕೆ ದಾಸರಾದರೆ ಮಕ್ಕಳಿಗೆ ಏನು ಪಾಠ ಮಾಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಶಿಕ್ಷಕರು ಬಾರ್‌ಗಳಲ್ಲಿ ಕುಳಿತು ಮತ್ತೇರಿಸಿಕೊಳ್ಳುತ್ತಿರುವ ವಿಡಿಯೋ ಮಾಡಿದ್ದಾರೆ. ಜೊತೆಗೆ ಜಿಪಿಎಸ್ ಅಳವಡಿಸಿ ತರಗತಿಗೆ ನಿಗದಿಯಾದ ಸಂದರ್ಭದಲ್ಲಿ ಶಾಲೆಯಲ್ಲಿ ಯಾರೂ ಇಲ್ಲದಿರುವ ಚಿತ್ರಗಳನ್ನು ತೆಗೆದಿದ್ದಾರೆ.
ಈ ಚಿತ್ರಗಳು ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಎಲ್ಲ ಕಡೆ ವೈರಲ್ ಆಗಿದೆ. ಶಿಕ್ಷಕರನ್ನು ಅಮಾನತು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.