ಬೆಂಗಳೂರು, ನವೆಂಬರ್ 6 :
11,136 ಪೌರಕಾರ್ಮಿಕರಿಗೆ ಖಾಯಂ ನೌಕರಿ ನೀಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿದವರಿಗೆ 2 ಮತ್ತು 3ನೇ ಹಂತದಲ್ಲಿ ಬೆಂಗಳೂರು ಮತ್ತು ಬೆಂಗಳೂರಿನಾಚೆ ಇರುವ ನಗರ ಭಾಗದಲ್ಲಿನ ಪೌರಕಾರ್ಮಿಕರು, ಅವರಿಗೆ ಸರ್ಕಾರಿ ನೌಕರರನ್ನಾಗಿ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಭಗವಾನ್ ಬುದ್ಧ ಬಾಬಾ ಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಲೆಕ್ ಪಾರ್ಕ್ ಉದ್ಯಾನವನ ನಾಮಕರಣ ಸಮಾರಂಭದ ಉದ್ಘಾಟನೆ ಹಾಗೂ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರ ಆಪತ್ತು ನಿಧಿಯನ್ನು 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪೌರಕಾರ್ಮಿಕರನ್ನು ಖಾಯಂಗೊಳಿಸಲು ಸಮಿತಿ ರಚಿಸಿ ಅದರ ಶಿಫಾರಸ್ಸಿನನ್ವಯ ಕ್ರಮ ಕೈಗೊಳ್ಳಲಾಗಿದೆ. ದೀನದಲಿತರ ಕಲ್ಯಾಣವೇ ಸರ್ಕಾರ ಗುರಿಯಾಗಿಸಿಕೊಂಡಿದೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದರು.
*ಡಾ.ಬಿ.ಆರ್.ಅಂಬೇಡ್ಕರ್ ಆಧುನಿಕ ಭಾರತದ ಪ್ರಜಾಪ್ರಭುತ್ವದ ಪಿತಾಮಹ :*
ಬುದ್ಧ ಜ್ಞಾನದ ಪ್ರತೀಕ. ಗೌತಮ ಬುದ್ಧ ತನ್ನ ರಾಜ್ಯವನ್ನು ತ್ಯಜಿಸಿ, ಜ್ಞಾನವನ್ನು ಪಡೆದು ಸಾಮಾಜಿಕ , ಧಾರ್ಮಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿದರು. ಅಂಬೇಡ್ಕರ್ ರವರು, ಬುದ್ಧನ ಮಾರ್ಗದಲ್ಲಿ ನಡೆದು ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಸಮನಾದ ಹಕ್ಕುಗಳನ್ನು ನೀಡಿ, ಜಾಗೃತಿಯನ್ನು ಮೂಡಿಸಿ, ದೇಶದಲ್ಲಿ ಸಮಾನತೆ, ಏಕತೆ, ಪ್ರಜಾಪ್ರಭುತ್ವ ಉಳಿಸಿದ್ಧಾರೆ. ಆಧುನಿಕ ಭಾರತದ ಪ್ರಜಾಪ್ರಭುತ್ವದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್. ಸಂವಿಧಾನವನ್ನು ರಚಿಸಿರುವ ಮಹಾತ್ಮನನ್ನು ನಾವೆಲ್ಲರೂ ಸದಾ ಕಾಲ ಸ್ಮರಿಸಬೇಕು ಎಂದರು.
*ಸಾಮಾಜಿಕ ನ್ಯಾಯವನ್ನು ಕಾರ್ಯರೂಪಕ್ಕೆ ತರುವುದು ನನ್ನ ಮನದಾಳದ ಭಾವನೆಯಾಗಿತ್ತು:*
ಮೀಸಲಾತಿ ಹೆಚ್ಚಳವೆಂಬ ಜೇನುಗೂಡಿಗೆ ಕೈಹಾಕಬೇಡಿ ಎಂದು ನನಗೆ ಬಹಳ ಜನ ಸಲಹೆ ನೀಡಿದ್ದರು. ಆದರೂ ಅವುಗಳನ್ನು ಲೆಕ್ಕಿಸಲಿಲ್ಲ.ಮಾನವೀಯ ಗುಣವಿಲ್ಲದವರು ಎಂದಿಗೂ ಆಡಳಿತ ನಡೆಸಬಾರದು. ಅವರ ಜನಸಂಖ್ಯೆಗೆ ಅನುಗುಣವಾಗಿ ಆ ಜನಾಂಗಗಳಿಗೆ ನ್ಯಾಯ ದೊರಕಿಸುವುದು ನಮ್ಮ ಧರ್ಮ. ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿಯವರು ನನಗೆ ಸದಾ ಕಾಲ ಪ್ರೇರಣೆಯಾಗಿದ್ದಾರೆ. ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣವಾಗಿಸದೇ ಕಾರ್ಯರೂಪಕ್ಕೆ ತರಬೇಕೆಂಬ ನನ್ನ ಮನದಾಳದ ಭಾವನೆಯಾಗಿತ್ತು. ಮುಖ್ಯಮಂತ್ರಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಭಾವನೆ ಅರ್ಥಮಾಡಿಕೊಳ್ಳಬೇಕು. ಮಹಾತ್ಮ ಗಾಂಧಿಯವರು , ದೀನದಲಿತರ ಬಗ್ಗೆ ನಿರ್ಣಯ ಕೈಗೊಳ್ಳುವಾಗ ಅವರ ಕಣ್ಣೀರನ್ನು ನೆನಪಿಸಿಕೋ ಎಂದು ತಿಳಿಸಿದ್ದರು. ಅದರಂತೆ ಈ ಜನಾಂಗಕ್ಕೆ ನ್ಯಾಯ ನೀಡಲು ಸ್ಪಂದಿಸಲೇಬೇಕೆಂಬ ಬಯಕೆಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇನೆ. ಇದಕ್ಕೆ ಸಂಬಂಧಿಸಿದ ಕಾನೂನು ಹೋರಾಟವನ್ನು ನಿಷ್ಟೆ, ಪ್ರಾಮಾಣಿಕತೆಯಿಂದ ಕೈಗೊಳ್ಳುತ್ತೇನೆ. ಸಂವಿಧಾನತ್ಮಕವಾದ ಹಕ್ಕುಗಳನ್ನು ನೀಡಲು ತಡವೇಕೆ ಮಾಡಬೇಕು. ನಿಮ್ಮ ಬೇಡಿಕೆಗಳೆಲ್ಲವನ್ನೂ ಪೂರೈಸುವತ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
*ದೀನದಲಿತರ ಒಳಿತಿಗಾಗಿ ಸರ್ಕಾರ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡಿದೆ :*
ಅಂಬೇಡ್ಕರ್ ರವರು ತಿಳಿಸಿದಂತೆ, ಶಿಕ್ಷಣ, ಸಂಘಟನೆ ಮತ್ತು ಹೋರಾಟವನ್ನು ಎಂದಿಗೂ ಮರೆಯಬೇಡಿ. ನಿಮ್ಮ ಹಕ್ಕನ್ನು ಪಡೆಯಲು ಶಿಕ್ಷಣ ಬಹಳ ಮುಖ್ಯ. ಸಂಘಟನೆಯಲ್ಲಿ ಶಕ್ತಿಯಿದ್ದರೆ, ಪ್ರಜಾಪ್ರಭುತ್ವದಲ್ಲಿ ಬೆಲೆ ಬರುತ್ತದೆ. ನ್ಯಾಯಸಮ್ಮತವಾದ ಹೋರಾಟ ನಡೆಸಲು ಸಂವಿಧಾನದ ಹಕ್ಕು.. ಬಡವರಿಗೆ ದೀನದಲಿತರ ಒಳಿತಿಗಾಗಿ ಸರ್ಕಾರ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡರೆ, ಕೆಲವರು ಗೊಂದಲ ಸೃಷ್ಟಿಸುತ್ತಾರೆ. ಅಪಸ್ವರಗಳನ್ನು ಆಡುತ್ತಿದ್ದಾರೆ. ಸಂವಿಧಾನಬದ್ಧವಾಗಿಇ ಕೆಲಸ ಮಾಡುತ್ತಿದ್ದೇವೆ. ಕಾನ್ಶಿರಾಮ್ ನಗರದ ಅಭಿವೃದ್ಧಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅಂಬೇಡ್ಕರ್ ಭವನದಲ್ಲಿರುವ ಕಾರ್ಯಕ್ರಮಗಳು , ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು. ಸಕಾರಾತ್ಮಕ ಚಿಂತನೆಯ ಕಾರ್ಯಕ್ರಮಗಳು ಇಲ್ಲಿ ನಡೆಯಬೇಕು ಎಂದರು.
ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀ ನಿವಾಸ ಪೂಜಾರಿ, ಸಚಿವ ಗೋವಿಂದ ಕಾರಜೋಳ ಮೊದಲಾದವರು ಉಪಸ್ಥಿತರಿದ್ದರು
ವರದಿ ಆಕಾಶ್ ಚಲವಾದಿ ಬೆಂಗಳೂರು 9008827439