ಬಿಜೆಪಿ ಕಾರ್ಯಕರ್ತನ ಕಿರುಕುಳಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿ ಆತ್ಮಹತ್ಯೆ
ಕೊಟ್ಟಿಗೆಹಾರ- ಬಿಜೆಪಿ ಕಾರ್ಯಕರ್ತನ ಕಿರುಕುಳಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ.
ಸಾವಿಗೂ ಮೊದಲು ಬಾಲಕಿ ಆಸ್ಪತ್ರೆಯಲ್ಲಿ ಡೆತ್ ನೋಟ್ ಬರೆದಿದ್ದು, ಬಿಜೆಪಿ ಕಾರ್ಯಕರ್ತ ಹಿತೇಶ್(25) ಎಂಬಾತ ತನ್ನ ಸಾವಿಗೆ ಕಾರಣ ಎಂದು ತಿಳಿಸಿದ್ದಾಳೆನ್ನಲಾಗಿದೆ. ಆದರೂ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸದೇ ನಿರ್ಲಕ್ಷ್ಯವಹಿಸಿರುವ ಘಟನೆ ನಡೆಸಿದೆ.
ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ 17 ವರ್ಷದ ದೀಪ್ತಿ ಮೃತ ದುರ್ದೈವಿಯಾಗಿದ್ದಾಳೆ. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಬಳಿಕ ಬಿಜೆಪಿ ಕಾರ್ಯಕರ್ತ ವಂಚಿಸಿದ್ದಾನೆ. ಇದರಿಂದ ನೊಂದು ಜನವರಿ 10ರಂದು ಬಾಲಕಿ ಕಳೆ ನಾಶಕ ಸೇವಿಸಿದ್ದಾಳೆ.
ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜನವರಿ 14ರಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಇನ್ನೂ ಆರೋಪಿ ಹಿತೇಶ್ ವಿರುದ್ಧ ಬಾಲಕಿಯ ಪೋಷಕರು ದೂರು ನೀಡಿದರೂ ಕುದುರೆ ಮುಖ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ್ದು, ಎಸ್.ಪಿ. ತರಾಟೆಗೆತ್ತಿಕೊಂಡ ಬಳಿಕ ಪ್ರಕರಣ ದಾಖಲಿಸಿದ್ದಾರೆ. ಆದರೆ ಈವರೆಗೆ ಆರೋಪಿಯನ್ನು ಬಂಧಿಸಿಲ್ಲ.
ಬಿಜೆಪಿ ಕಾರ್ಯಕರ್ತ ಅನ್ನೋ ಕಾರಣಕ್ಕೆ ಪೊಲೀಸರು ಹಿತೇಶ್ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.