ಲಂಚ ಪಡೆದು ಸಿಕ್ಕಿಬಿದ್ದು ಓಡಿ ಹೋಗುತ್ತಿದ್ದ ಭ್ರಷ್ಟ ಅಧಿಕಾರಿಯನ್ನು ಚೇಸಿಂಗ್ ಮಾಡಿ ಹಿಡಿದ ಲೋಕಾಯುಕ್ತ ಪೊಲೀಸರು
ಬೆಂಗಳೂರು: ನಗರದಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಫಿಲ್ಮಿ ಸ್ಟೈಲ್‍ನಲ್ಲಿ 15 ಕಿ.ಮೀ ಚೇಸಿಂಗ್ ಮಾಡಿ ಹಿಡಿದ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪದಲ್ಲಿ ನಡೆದಿದೆ.
ರಂಗದಾಮಯ್ಯ ಎಂಬುವವರು ಕೆ.ಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಆಫೀಸ್‍ನ ಫುಡ್ ಇನ್‍ಸ್ಪೆಕ್ಟರ್ ಆಗಿರುವ ಮಹಂತೇಗೌಡ ಬಳಿ ಟ್ರೇಡ್ ಲೈಸೆನ್ಸ್ ಮಾಡಿಸಲು ತೆರಳಿದ್ದರು. ಈ ವೇಳೆ ಅಧಿಕಾರಿ 1 ಲಕ್ಷ ರೂ. ಹಣವನ್ನು ಲಂಚವನ್ನಾಗಿ ಕೇಳಿದ್ದ. ಮುಂಗಡವಾಗಿ 43 ಸಾವಿರ ರೂ. ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು ಟ್ರ್ಯಾಪ್ ಮಾಡಿದ್ದಾರೆ. ಹಣ ಪಡೆಯುವ ವೇಳೆ ಟ್ರ್ಯಾಪ್ ಎಂದು ತಿಳಿದು ಪರಾರಿಯಾಗಲು ಮಹಂತೇಗೌಡ ಯತ್ನಿಸಿದ್ದಾನೆ. ಹಣ ಪಡೆದು ಸುಮಾರು 15 ಕಿ.ಮೀ ತೆರಳಿದ್ದಾನೆ. ಆದರೆ ಬೆನ್ನಟ್ಟಿದ ಲೋಕಾ ಅಧಿಕಾರಿಗಳು ಮಹಂತೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.