ತರಗತಿ ಪರೀಕ್ಷೆಯಲ್ಲಿ ನಕಲು ಮಾಡುವ ವೇಳೆ ಶಿಕ್ಷಕರ ಕೈಗೆ ಸಿಕ್ಕಿಬಿದ್ದ ವಿದ್ಯಾರ್ಥಿ – ಅವಮಾನಕ್ಕೆ ಆತ್ಮಹತ್ಯೆ
ಬೆಂಗಳೂರು: ತರಗತಿ ಪರೀಕ್ಷೆಯಲ್ಲಿ ನಕಲು ಮಾಡುವ ವೇಳೆ ಶಿಕ್ಷಕರ ಕೈಗೆ ಸಿಕ್ಕಿಬಿದ್ದ ವಿದ್ಯಾರ್ಥಿಯನ್ನು ಕೂಡಲೇ ಪರೀಕ್ಷಾ ಕೊಠಡಿಯಿಂದ ಹೊರಗೆ ಕಳುಹಿಸಲಾಗಿತ್ತು. ಇದರಿಂದ ನೊಂದ ವಿದ್ಯಾರ್ಥಿ ಅಪಾರ್ಟ್ಮೆಂಟ್ ನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಹೆಗಡೆ ನಗರದಲ್ಲಿ ನಡೆದಿದೆ.
16 ವರ್ಷದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಮೊಯಿನ್ ಖಾನ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಗಳವಾರ ಸಂಜೆ ವೇಳೆಗೆ ಅಪಾರ್ಟ್ಮೆಂಟ್ 14ನೇ ಮಹಡಿ ಏರಿದ್ದ ಮೊಯಿನ್ ಖಾನ್ ನನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಆತನನ್ನು ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. ಆದರೆ, ಯಾರ ಮಾತನ್ನೂ ಕೇಳದ ಆತ ಎಲ್ಲರೂ ನೋಡ ನೋಡುತ್ತಿದ್ದಂತೆ ಕೆಳಗೆ ಹಾರಿದ್ದಾನೆ. ಮೇಲಿಂದ ಕೆಳಕ್ಕೆ ಬಿದ್ದ ರಭಸಕ್ಕೆ ಆತನ ಪ್ರಾಣಪಕ್ಷಿ ಹಾರಿಹೋಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ಶಾಲೆಯಲ್ಲಿ ತರಗತಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಮೊಯಿನ್ ಕಾಪಿ ಮಾಡಿದ್ದಾನೆ. ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದನ್ನು ಕಂಡ ಶಿಕ್ಷಕರು ಕೂಡಲೇ ತರಗತಿಯಿಂದ ಆಚೆ ಕಳುಹಿಸಿದ್ದಾರೆ. ಇಷ್ಟಕ್ಕೇ ಬೇಸರಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಶಾಲೆಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದು, ಮೊಯಿನ್ ಖಾನ್ ಸಾವಿಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.