ಭಟ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಮ್ ಇದ್ದರೆ ಹಿಂದೂ ರಾಷ್ಟ್ರ ಆಗುವುದನ್ನು ತಪ್ಪಿಸಲಿ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಭಾನುವಾರ ನಗರದಲ್ಲಿ ಎರಡು ವರ್ಷಗಳ ಬಳಿಕ ಪ್ರಥಮ ಬಾರಿಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಹಿಜಾಬ್ ಹಿಂದೆ ತಿರುಗುವ ಕಾಂಗ್ರೆಸ್ ಸರ್ಕಾರವಿದೆ. ಕೇವಲ ಓಲೈಕೆ ರಾಜಕಾರಣದ ಮಾಡುತ್ತದೆ. ಅಲ್ಪಸಂಖ್ಯಾತ ಮತ ಇಲ್ಲದೆ ಕಾಂಗ್ರೆಸ್ ಬದಕಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಮೊದಲಿನಿಂದಲೂ ಬಹುಸಂಖ್ಯಾತರ ಪರ ರಾಜಕಾರಣ ಮಾಡಿಲ್ಲ. ಸಿಎಂಗೆ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಬೇಕು ಎಂದು ಸವಾಲು ಹಾಕಿದರು.
ಯಾರು ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು ಎಂಬ ಸಿದ್ದರಾಮಯ್ಯ ಹೇಳಿಕೆ ಭವಿಷ್ಯದಲ್ಲಿ ಹಲವು ಸಮಸ್ಯೆಗೆ ಕಾರಣವಾಗಲಿದೆ. ಸಾಮಾಜಿಕ ಚೌಕಟ್ಟಿನ ಕಲ್ಪನೆಯೇ ಇಲ್ಲದ ಸರ್ಕಾರ, ಸಮವಸ್ತ್ರ ಕಲ್ಪನೆ ಬಿಟ್ಟು ಬೇಕಾಬಿಟ್ಟಿ ಹೇಳಿಕೆ ನೀಡುವುದು ಸರಿಯಲ್ಲ. ಇಂಥ ಹಿಂದೂ ವಿರೋಧಿ ಸರ್ಕಾರ ಕರ್ನಾಟಕದಲ್ಲಿ ಬಹಳ ದಿನ ಇರಲು ಸಾಧ್ಯವಿಲ್ಲ ಎಂದೂ ಹೇಳಿದರು.
ಟಿಪ್ಪು ಈ ರಾಜ್ಯದ ಜನತೆ ತೆಗೆದಿಟ್ಟ ವ್ಯಕ್ತಿ. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ ಟಿಪ್ಪು. ಅವನ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತದೆ ಎಂದೂ ವಾಗ್ದಾಳಿ ನಡೆಸಿದರು.