*ಪ್ರಕೃತಿಯ ಆಭರಣಗಳಾದ ಕಾಡು ಹಾಗೂ ಕಾಡುಪ್ರಾಣಿಗಳನ್ನು ಉಳಿಸುವ ಶಪಥ ಮಾಡಬೇಕಿದೆ- ಎಂ .ಎನ್ ಜಯಕುಮಾರ್*
*ಬೆಂಗಳೂರು, ನವೆಂಬರ್ 10,2022*: .ʼಪ್ರಾಣಿ ಹಾಗೂ ಪಕ್ಷಿ ಸಂಕುಲಗಳ ಬದುಕನ್ನು ಚಿತ್ರಿಸುವ ಅತ್ಯುತ್ತಮ ಚಿತ್ರಗಳನ್ನು ಸೂರ್ಯಪ್ರಕಾಶ್ ಕ್ಲಿಕ್ಕಿಸಿದ್ದಾರೆ. ನಿವೃತ್ತಿ ನಂತರದ ಒಂಭತ್ತು ವರ್ಷಗಳ ಅವರ ಸಾಧನೆ ಪ್ರಶಂಸಾರ್ಹ. ಈ ಪ್ರದರ್ಶನಕ್ಕೆ ಬಂದು ಚಿತ್ರಗಳನ್ನು ವೀಕ್ಷಿಸಿದವರಲ್ಲಿ ಕನಿಷ್ಠ ಶೇ 5ರಷ್ಟು ಜನರಾದರೂ ಪ್ರಕೃತಿಯ ಆಭರಣಗಳಾದ ಕಾಡು ಹಾಗೂ ಕಾಡುಪ್ರಾಣಿಗಳನ್ನು ಉಳಿಸುವ ಶಪಥ ಮಾಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ಸವಾಲುಗಳನ್ನೇ ಜೀವಿಸುವ ಛಾಯಾಗ್ರಾಹಕನ ಪ್ರಯತ್ನ ಸಫಲವಾದಂತೆ ಆಗುತ್ತದೆ ಎಂದು ಎಂ .ಎನ್ ಜಯಕುಮಾರ್ ಅವರು ತಿಳಿಸಿದರು.
*ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸೂರ್ಯ ಪ್ರಕಾಶ್ ಕೆ.ಎಸ್* ಅವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವನ್ನು ನವೆಂಬರ್ 10 ರಿಂದ 13ರವರೆಗೆ ಆಯೋಜಿಸಲಾಗಿದ್ದು, ಮೂರು ದಿನಗಳವರೆಗೆ ನಡೆಯಲಿರುವ ಈ “ವೈಲ್ಡ್ ಮೂಮೆಂಟ್ಸ್” ಪ್ರದರ್ಶನದಲ್ಲಿ ಎಂ .ಎನ್ ಜಯಕುಮಾರ್ (ಐಎಫ್ ಎಸ್ (ಆರ್), ಎಫ್ ಆರ್ ಪಿಎಸ್, ಎಂಎಫ್ ಐಎಪಿ | ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ಸರ್ಕಾರ) ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ , ಡಾ. ಅಜಿತ್ ಕೆ ಹುಲ್ಗೋಲ್ (ಎಂಬಿಬಿಎಸ್, ಎಂಎಸ್, ಎಂಎನ್ ಎ ಎಂಎಸ್), ಬಿ ಶ್ರೀನಿವಾಸ್ (ಎಫ್ ಆರ್ ಪಿಎಸ್, ಎಂಎಫ್ ಐಎಪಿ, ಎಚ್ ಒ ಎನ್. ಎಫ್ ಐಸಿಎಸ್, ಎಚ್ ಒಎನ್. ಎಫ್ ಎಪಿಎ, ಎಚ್ ಒಎನ್. ಎಫ್ ಐಪಿ) ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
*ಸೂರ್ಯಪ್ರಕಾಶ್ ಅವರ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದ ಎಂ .ಎನ್ ಜಯಕುಮಾರ್ ಅವರು,* ʼ2022ರ ವರದಿಯ ಪ್ರಕಾರ ಕಳೆದ 50 ವರ್ಷಗಳಲ್ಲಿ ಜಗತ್ತಿನ ಶೇ 59ರಷ್ಟು ಪ್ರಾಣಿಸಂಕುಲ ನಾಶವಾಗಿದೆ. ಇದು ಹೀಗೇ ಮುಂದುವರಿದರೆ ಮನುಕುಲ ಸಾಕಷ್ಟು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.ʼಪ್ರಾಣಿ ಹಾಗೂ ಪಕ್ಷಿ ಸಂಕುಲಗಳ ಬದುಕನ್ನು ಚಿತ್ರಿಸುವ ಅತ್ಯುತ್ತಮ ಚಿತ್ರಗಳನ್ನು ಸೂರ್ಯಕುಮಾರ್ ಕ್ಲಿಕ್ಕಿಸಿದ್ದಾರೆ. ನಿವೃತ್ತಿ ನಂತರದ ಒಂಭತ್ತು ವರ್ಷಗಳ ಅವರ ಸಾಧನೆ ಪ್ರಶಂಸಾರ್ಹ. ಈ ಪ್ರದರ್ಶನಕ್ಕೆ ಬಂದು ಚಿತ್ರಗಳನ್ನು ವೀಕ್ಷಿಸಿದವರಲ್ಲಿ ಕನಿಷ್ಠ ಶೇ 5ರಷ್ಟು ಜನರಾದರೂ ಪ್ರಕೃತಿಯ ಆಭರಣಗಳಾದ ಕಾಡು ಹಾಗೂ ಕಾಡುಪ್ರಾಣಿಗಳನ್ನು ಉಳಿಸುವ ಶಪಥ ಮಾಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ಸವಾಲುಗಳನ್ನೇ ಜೀವಿಸುವ ಛಾಯಾಗ್ರಾಹಕನ ಪ್ರಯತ್ನ ಸಫಲವಾದಂತೆ ಆಗುತ್ತದೆ. ‘ಛಾಯಾಗ್ರಹಣ ಸುಲಭವಲ್ಲ. ಕ್ಯಾಮೆರಾ ಹಿಡಿದು, ಅಂದಿನ ವಾತಾವರಣಕ್ಕೆ, ಛಾಯಾಚಿತ್ರಕ್ಕೆ ಸಂಬಂಧ ಪಟ್ಟಂತೆ ಅಪ್ಪರ್ಚರ್ ಹೊಂದಿಸಿಕೊಳ್ಳುವುದುರ ಜೊತೆಗೆ ನೂರಾರು ಸ್ಥಳಗಳಿಗೆ ಓಡಾಡಬೇಕಾಗುತ್ತದೆ. ಹುಲಿಯ ಚಿತ್ರ ಬೇಕು ಎಂದರೆ ಹುಲಿ ಮೀಸಲು ಪ್ರದೇಶಗಳಿಗೇ ಹೋಗಬೇಕು. ಅಲ್ಲಿ ಹುಲಿ ಕಣ್ಣಿಗೆ ಬೀಳಬೇಕು. ಒಂದೊಮ್ಮೆ ಹುಲಿ 100 ಸಲ ಕಣ್ಣಿಗೆ ಬಿತ್ತು ಅಂದುಕೊಳ್ಳಿ. ಚಿತ್ರ ಕ್ಲಿಕ್ಕಿಸಲು ಅವಕಾಶ ಸಿಗುವುದು 15ರಿಂದ 20 ಬಾರಿ. ಅದರಲ್ಲಿ ಪ್ರಕಟಣೆಗೆ ಯೋಗ್ಯವಾಗುವಂಥ ಚಿತ್ರ ಸಿಗುವುದು 3 ಅಥವಾ 4 ಮಾತ್ರ. ಹೀಗಾಗಿ ತಾಳ್ಮೆ ಇದ್ದು ಕಠಿಣ ಪರಿಶ್ರಮ ಪಟ್ಟವರಿಗೆ ಮಾತ್ರ ಸುಂದರವಾದ, ಆಕರ್ಷಕವಾದ ಛಾಯಾಚಿತ್ರ ದೊರೆಯಲು ಸಾಧ್ಯ’ ಎಂದರು.
*ಕಾರ್ಯಕ್ರಮದ ಕೇಂದ್ರಬಿಂದುವಾದ ಛಾಯಾಗ್ರಾಹಕ ಸೂರ್ಯಪ್ರಕಾಶ ಮಾತನಾಡಿ,* ʼ32 ವರ್ಷಗಳ ಕಾಲ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ಛಾಯಾಗ್ರಹಣವನ್ನು ಹವ್ಯಾಸವಾಗಿ ತೆಗೆದುಕೊಂಡೆ. ಛಾಯಾಗ್ರಹಣದ ದಂತಕಥೆಯಾದ ಶ್ರೀನಿವಾಸ್ ಅವರ ಮಾರ್ಗದರ್ಶನಲ್ಲಿ ನಾನು ಛಾಯಾಗ್ರಹಣದ ಪಟ್ಟುಗಳನ್ನು ಕಲಿತೆ. ಪ್ರತಿ ಸನ್ನಿವೇಶಗಳಲ್ಲಿಯೂ ನನ್ನ ಜೊತೆ ನಿಂತು ಛಾಯಾಗ್ರಹಣದ ವಿವಿಧ ಮಜಲುಗಳನ್ನು ತಿಳಿಸಿಕೊಟ್ಟರು. ಇವತ್ತು ನನಗೆ ವಿಶೇಷವಾದ ದಿನ. ಗುರುವಿನಿಂದ ಕಲಿತ ಒಂದೊಂದು ಪಾಠಗಳನ್ನು ಪ್ರದರ್ಶನಕ್ಕಿಟ್ಟು ಅವರಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿದ ಸುದಿನʼ ಎಂದರು.
ಇನ್ನು ಈ ಕಾರ್ಯಕ್ರಮದ ಕುರಿತು *ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್* ಅವರು “ಸೂರ್ಯಪ್ರಕಾಶ್ ಕೆ.ಎಸ್ ಅವರ ಛಾಯಾಚಿತ್ರಗಳನ್ನು ನೋಡುವುದೇ ಕಣ್ಣಿಗೆ ಖುಷಿ. ಇವರ ಕೆಲವೊಂದು ಛಾಯಾಚಿತ್ರಗಳನ್ನು ನೋಡುತ್ತಿದ್ದರೆ ಅದನ್ನು ಫೋಟೋ ಎಂದು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ.ಅದು ಛಾಯಾಚಿತ್ರವಿದ್ದ ಹಾಗೇ ಇಲ್ಲ. ಯಾರೋ ಒಬ್ಬ ಕಲಾವಿದನ ಕೈಯಲ್ಲರಳಿದ ಕಲಾಕೃತಿಯ ಹಾಗೆ ಇದೆ. ಈಗ ಯಾರ ಹತ್ತಿರ ಸ್ಮಾರ್ಟ್ ಫೋನ್ ಇದೆಯೋ ಅವರೆಲ್ಲರೂ ಫೋಟೊಗ್ರಾಫರ್ , ಪತ್ರಕರ್ತರು! ನನಗೆ ಇರುವ ಪ್ರತಿಸ್ಪರ್ಧಿ ಎಂದರೆ ಮೊಬೈಲ್ ಎನ್ನಬಹುದು. ಜಯಕುಮಾರ್ ಹಾಗೂ ಇತರೆ ವನ್ಯಜೀವಿ ಛಾಯಾಚಿತ್ರಕಾರರು ಸೆಲ್ಫಿಯನ್ನು ತೆಗೆಯದೇ ನಿಜವಾದ ಚಿತ್ರಗಳನ್ನು ತೆಗೆದಿದ್ದರಿಂದ ನಮಗೆ ಕಾಡಿನ ಬಗ್ಗೆ ಒಂದಷ್ಟು ತಿಳಿಯಲು ಸಾಧ್ಯವಾಯಿತು.ಇನ್ನು ನಾಡಿನಲ್ಲಿರುವ ಮನುಷ್ಯರಷ್ಟೂ ಅಪಾಯಕಾರಿ ಬೇರೆ ಯಾರೂ ಇಲ್ಲ ಅನ್ನಬಹುದು. ಸೌಂದರ್ಯ ದೃಷ್ಟಿಯಿಂದಲೂ ಪ್ರಾಣಿಗಳು ಅದ್ಭುತವಾದದ್ದು. ಪ್ರಾಣಿಗಳಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ ಎಂದರು.
ಸ್ಥಳ: ಚಿತ್ರಕಲಾ ಪರಿಷತ್
ದಿನಾಂಕ: ನವೆಂಬರ್ 10-13
ಪ್ರವೇಶ-ಉಚಿತ