ಮೋದಿ ಮತ್ತೊಮ್ಮೆ ಪ್ರಧಾನಿ ಅಗಲೆಂದು ತನ್ನ ಕೈ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತವನ್ನು ಅರ್ಪಿಸಿದ ಮೋದಿ ಭಕ್ತ
ಕಾರವಾರ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿ ವ್ಯಕ್ತಿಯೊಬ್ಬ ಎಡಗೈ ಬೆರಳನ್ನು ಕತ್ತರಿಸಿ ರಕ್ತ ಅರ್ಪಿಸಿದ ಭಯಾನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.
ಕೈಬೆರಳು ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ವ್ಯಕ್ತಿಯನ್ನು ಅರುಣ್ ವರ್ಣೇಕರ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಮೋದಿಗಾಗಿ ಗುಡಿಯೊಂದನ್ನು ನಿರ್ಮಿಸಿ ಪೂಜೆ ಕೂಡ ಮಾಡುತ್ತಿದ್ದಾರೆ.
ಬೆರಳು ಕತ್ತರಿಸಿಕೊಂಡು ಅರುಣ್, ‘ಮೋದಿ ಮತ್ತೆ ಪ್ರಧಾನಿಯಾಗಬೇಕು’ ಎಂದು ಗೋಡೆ ಮೇಲೆ ರಕ್ತದಲ್ಲಿ ರಕ್ತದಲ್ಲಿ ಬರೆದಿದ್ದಾರೆ.
ಬೆರಳು ತುಂಡುಮಾಡಿಕೊಂಡು ಅದರಿಂದ ಸುರಿದ ರಕ್ತದಲ್ಲಿ, ‘‘ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ’’ ಎಂದು ಬರೆದಿದ್ದಾರೆ. ‘‘ಮೋದಿ ಬಾಬ ಪಿಎಂ, 3 ಬಾರ್ 78ತಕ್ 378, 378+ ಮೇರ ಮೋದಿ ಬಾಬಾ ಸಬ್ ಸೆ ಮಹಾನ್ ’ ಎಂದು ಗೋಡೆ ಮೇಲೆ ಹಾಗೂ ಪೋಸ್ಟರ್ನಲ್ಲಿ ಅರುಣ್ ಬರೆದಿದ್ದಾರೆ.
ಮೋದಿ ಮೊದಲ ಬಾರಿ ಚುನಾವಣೆಗೆ ನಿಂತಾಗ ಕೂಡ ಇದೇ ಅರುಣ್ ರಕ್ತದಲ್ಲಿ ಕಾಳಿಗೆ ಹರಕೆ ಇಟ್ಟಿದ್ದರು. ಈ ಹಿಂದೆಯೂ ಬೆರಳು ಕೊಯ್ದುಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ನೀಡಿದ್ದರು. ಇದು ಕೊನೆಯಬಾರಿ ಆದ್ದರಿಂದ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ತುಂಡರಿಸಿ ಕಾಳಿಗೆ ಅರ್ಪಿಸಿದ್ದಾರೆ.
ಮೋದಿ ಭೇಟಿಯ ಬಯಕೆ ವ್ಯಕ್ತಪಡಿಸಿದ್ದ ಅರುಣ್ ವರ್ಣೇಕರ್:
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೂಡ ಮೋದಿ ಗೆಲುವಿಗಾಗಿ ಪ್ರಾರ್ಥಿಸಿ ಅರುಣ್ ವರ್ಣೇಕರ್ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು. 2019ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕತ್ತಿಯಿಂದ ಬೆರಳು ಕತ್ತರಿಸಿಕೊಂಡಿದ್ದರು. ಬಳಿಕ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು. ಜತೆಗೆ ಸಾಯಿ ಬಾಬಾ, ಪ್ರಧಾನಿ ಮೋದಿಯ ಫೋಟೊಗೂ ರಕ್ತದ ತಿಲಕವಿಟ್ಟಿದ್ದರು.
ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಅಂಕೋಲಾಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ಪ್ರಯತ್ನಿಸುವುದಾಗಿ ತಿಳಿಸಿದ್ದರು. ಆದರೆ, ಅವರ ಬಯಕೆ ಈಡೇರಿರಲಿಲ್ಲ.