*ಸರಕಾರದ ಆದೇಶ ತುಳುನಾಡಿನ ಜನತೆಯ ಒಗ್ಗಟ್ಟಿನ ಹೋರಾಟದ ಫಲ. ಟೋಲ್ ಸಂಗ್ರಹ ಸ್ಥಗಿತಗೊಳ್ಳುವವರಗೆ ಧರಣಿ ಮುಂದುವರಿಯುತ್ತದೆ.*
ಆರು ವರ್ಷಗಳ ಸತತ ಹೋರಾಟದ ನಂತರ ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. ಇದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಸ್ಥ ಜನತೆಯ ಒಗ್ಗಟ್ಟಿನ ಹೋರಾಟದ ಫಲ. ಜನತೆಯ ಅಖಂಡ ಬೆಂಬಲದೊಂದಿಗೆ ಹೋರಾಟ ಸಮಿತಿ ಕಳೆದ ಮೂರು ತಿಂಗಳಿಂದ ನಿರ್ಣಾಯಕ ಹೋರಾಟಗಳನ್ನು ಸಂಘಟಿಸಿತ್ತು. ಅಂತಹ ದಣಿವರಿಯದ ಪ್ರಯತ್ನಗಳು ಇಂದು ಗೆಲುವಿನ ಸನಿಹಕ್ಕೆ ತಲುಪಿಸಿದೆ.
ಹಗಲು ರಾತ್ರಿ ಧರಣಿ ನಿರತವಾಗಿರುವ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಗೆ ಟೋಲ್ ಗೇಟ್ ತೆರವು ಕುರಿತು ಈವರೆಗೂ ಜಿಲ್ಲಾಡಳಿತದ ಕಡೆಯಿಂದ ಯಾವುದೆ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತ ಮಾಹಿತಿ, ಟೋಲ್ ಗೇಟ್ ನಲ್ಲಿ ಸಂಗ್ರಹ ನಿಲ್ಲುವವರೆಗೂ ಧರಣಿ ಮುಂದುವರಿಯಲಿದೆ. ಟೋಲ್ ಸಂಗ್ರಹ ಸ್ಥಗಿತಗೊಂಡ ತರುವಾಯವಷ್ಟೆ ಧರಣಿ ಸ್ಥಗಿತಗೊಳ್ಳಲಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಪ್ರಧಾನಿ ಹಾಗೂ ಸಾರಿಗೆ ಸಚಿವರಿಗೆ ಧನ್ಯವಾದ,ಸಲ್ಲಿಸಿದ್ದಾರೆ. ಬೆಂಬಲಿಗರು ಸಂಸದರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ನಿಜಕ್ಕೂ ಧನ್ಯವಾದ ಸಲ್ಲಬೇಕಾಗಿರುವುದು ಹೋರಾಟದ ಬೆನ್ನೆಲುಬಾಗಿ ನಿಂತ ತುಳುನಾಡಿನ ಸಮಸ್ತ ಜನತೆ ಹಾಗೂ ಸಹಭಾಗಿ ಸಮಾನ ಮನಸ್ಕ ಸಂಘಟನೆಗಳಿಗೆ. ಅದೇ ಸಂದರ್ಭ ಸುರತ್ಕಲ್ ಟೋಲ್ ಗೇಟ್ ನಲ್ಲಿ ಆರು ವರ್ಷಗಳಿಂದ ಸತತವಾಗಿ ಸರಿಸುಮಾರು ಮುನ್ನೂರು ಕೋಟಿ ರೂಪಾಯಿ ನಿಯಮಕ್ಕೆ ವಿರುದ್ದವಾಗಿ ಸಂಗ್ರಹಿಸಲಾಗಿದೆ. ಸಂಸದರು, ಶಾಸಕರುಗಳು ಟೋಲ್ ತೆರವಿನ ದೀರ್ಘ ವಿಳಂಬಕ್ಕಾಗಿ ತುಳುನಾಡಿನ ಜನತೆಯ ಮುಂದೆ ಈಸಂದರ್ಭ ಕನಿಷ್ಟ ವಿಷಾಧವನ್ನಾದರು ವ್ಯಕ್ತಪಡಿಸಬೇಕು ಎಂದು ಹೋರಾಟ ಸಮಿತಿ ಆಗ್ರಹಿಸುತ್ತದೆ.
ಮುನೀರ್ ಕಾಟಿಪಳ್ಳ, ಸಂಚಾಲಕರು
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್