ತರೀಕೆರೆ: ಗಣಪತಿ ತರಲು ಹೋಗುತ್ತಿದ್ದಾಗ ಟಾಟಾ ಏಸ್ ಆಟೋ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕಮಂಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಶನಿವಾರ ನಡೆದಿದೆ.
ಲಿಂಗದಹಳ್ಳಿ ನಿವಾಸಿಗಳಾದ ಶ್ರೀಧರ್ (20) ಧನುಷ್ (20) ಮೃತ ಯುವಕರು. ಗಣಪತಿ ತರಲು 9 ಜನ ಯುವಕರು ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ.
ಟಾಟಾ ಏಸ್ ಬಿದ್ದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.ಆಟೋದಲ್ಲಿದ್ದ ಇನ್ನಿತರ ಮೂರು ಯುವಕರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.