ಸಿದ್ದಾಪುರ: ಡಿಸೆಂಬರ್ 20 ರಿಂದ 22 ರವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಗೆ, ತಾಲೂಕಿನ ಭುವನಗಿರಿಯಲ್ಲಿರುವ ರಾಜ್ಯದ ಏಕೈಕ ಕನ್ನಡಾಂಬೆ ಭುವನೇಶ್ವರಿ ದೇವಿಯ ದೇವಸ್ಥಾನದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಾನುವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಡ್ಯದಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ಕಾರ್ಯಕ್ರಮ ನಡೆಯಿತು. ನಂತರ ಮಾತನಾಡಿದ ಸಚಿವರು, ಕದಂಬರ ಆರಾಧ್ಯ ದೇವರಾದ ಭುವನೇಶ್ವರಿ ಪುಣ್ಯ ಕ್ಷೇತ್ರವಾದ ಜಿಲ್ಲೆಯಿಂದ ಪ್ರಾರಂಭವಾಗುವ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯದ 31 ಜಿಲ್ಲೆ ಸೇರಿದಂತೆ 6 ಬೇರೆ ಬೇರೆ ರಾಜ್ಯದ ಗಡಿ ಪ್ರದೇಶದಲ್ಲಿ ಸಂಚರಿಸಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ತಲುಪಲಿದೆ ಎಂದರು.
ವಿಶೇಷವಾಗಿ ಕರ್ನಾಟಕ ಎಂದು ನಾಮಕರಣವಾಗಿ 50ರ ಸಂಭ್ರಮವನ್ನು ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿದೆ ಅದೇ ರೀತಿ ಡಿ. 20, 21 ಮತ್ತು 22 ರಂದು ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದ್ದು, 30 ಕೋಟಿ ಅನುದಾನ ಬಿಡುಗಡೆ ಮಾಡಲಿದೆ ಎಂದರು.ಕನ್ನಡ ಸಾಹಿತ್ಯದ ಮೇಲಿನ ಗೌರವ ಮತ್ತು ಕರ್ನಾಟಕ ನಾಮಕರಣದ 50ರ ಸಂಭ್ರಮವನ್ನು ವಿಜೃಂಭಣೆಯಿಂದ ನಡೆಯಲು ಎಲ್ಲಾ ಕನ್ನಡ ಹೃದಯಗಳು ಸಹಕಾರ ನೀಡಬೇಕು. ಕನ್ನಡ ನಾಡಿನ ನೆಲ ಜಲ, ಭಾಷೆ ಹಾಗೂ ಗಡಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಐತಿಹಾಸಿಕ ಸ್ಥಳವಾಗಿರುವ ಭುವನಗಿರಿಯ ಭುವನೇಶ್ವರಿ ದೇವಿ ದೇವಾಲಯದಲ್ಲಿ ಎರಡನೇ ಬಾರಿಗೆ ಕನ್ನಡ ಜ್ಯೋತಿ ರಥಕ್ಕೆ ಉದ್ಘಾಟಿಸಲಾಗಿದೆ. ಕನ್ನಡದ ಆಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಕರುನಾಡಿಗೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮಾತೃ ಭಾಷೆ ಬೇರೆಯಾಗಿದ್ದರೂ ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಗಾಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್ , ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ, ಮಂಡ್ಯದ ಸಹಾಯಕ ಆಯುಕ್ತ ಶಿವಮೂರ್ತಿ, ಕ.ಸಾ.ಪ ರಾಜ್ಯ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ, ತಹಶೀಲ್ದಾರ ಎಂ.ಆರ್ ಕುಲಕರ್ಣಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ದೇವರಾಜ ಹಿತ್ಲಾಕೊಪ್ಪ, ರಾಜ್ಯ ಕೋಶ ಅಧ್ಯಕ್ಷ ಬಿ.ಎನ್ ಪಾಟೇಲ್ ಪಾಂಡು, ಭುವನೇಶ್ವರಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ, ಗ್ರಾ,ಪಂ ಅಧ್ಯಕ್ಷ ಉಲ್ಲಾಸ ಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ, ಡಾ.ಶಶಿ ಭೂಷಣ್ ಹೆಗಡೆ, ಕೆ.ಜಿ ನಾಗರಾಜ ವಿವಿಧ ಜಿಲ್ಲಾ ಮತ್ತು ತಾಲೂಕು ಕ.ಸಾ.ಪ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ಮತ್ತಿತರರು ಇದ್ದರು.