ಚಿಕಿತ್ಸೆ ಕೊಡುವ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಕಾಮುಕ ನಕಲಿ ಡಾಕ್ಟರ್ ಬಂಧನ
ಬೆಂಗಳೂರು: ಚಿಕಿತ್ಸೆ ಕೊಡುವ ನೆಪದಲ್ಲಿ ಬಾಲಕಿಯರು, ಯುವತಿಯರು, ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಆರೋಪಿಯನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಆಂಧ್ರಪ್ರದೇಶದ ಗುತ್ತಿಯ ತಾಡಪತ್ರಿಯಲ್ಲಿ ಬಂಧಿಸಿದ್ದಾರೆ.
ಯಶವಂತಪುರದ ಮತ್ತಿಕೆರೆಯಲ್ಲಿ ನ್ಯಾಚುರೋಪಥಿ ಮತ್ತು ಆಕ್ಯುಪಂಕ್ಚರ್ ಕ್ಲಿನಿಕ್ ತೆರೆದು ನಡೆಸುತ್ತಿದ್ದ ವೆಂಕಟರಮಣ್ (57) ಬಂಧಿತ ನಕಲಿ ವೈದ್ಯ. ಈತನ ವಿರುದ್ಧ ಯಶವಂತಪುರ, ಬಸವನಗುಡಿ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಹೊರ ರಾಜ್ಯಕ್ಕೆ ಪರಾರಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದ ಗುತ್ತಿ ಮೂಲದ ವೆಂಕಟರಮಣ್ ಅಲಿಯಾಸ್ ವೆಂಕಟ್, ವೈದ್ಯರೊಬ್ಬರ ಸಹಾಯದಿಂದ ಮೆಜೆಸ್ಟಿಕ್ ಬಳಿ ಆಯುರ್ವೇದ ವೈದ್ಯರೊಬ್ಬರು ನಡೆಸಿಕೊಟ್ಟ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ವೆಂಕಟರಮಣ, ಜಯನಗರದ 4ನೇ ಬ್ಲಾಕ್ ನಲ್ಲಿ ಆಕ್ಯೂಪೈ ಇ.ಎಂ. ಇನ್ಸ್’ಟಿಟ್ಯೂಟ್ ನಲ್ಲಿ ಚಿಕಿತ್ಸೆ ತರಬೇತಿ ಪಡೆದುಕೊಂಡು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಆರಂಭಿಸಿದ್ದ. ತನ್ನ ಹೆಸರಿನ ಮುಂದೆ ‘ಡಾ’ ಎಂದೂ ಹಾಕಿಸಿಕೊಂಡಿದ್ದ, ಚಿಕಿತ್ಸೆಗೆ ಬಂದ ಮಹಿಳೆಯರು, ಯುವತಿಯರ ವಿಡಿಯೊ ಚಿತ್ರೀಕರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮರ್ಯಾದೆಗೆ ಅಂಜಿದ್ದ ಕೆಲವರು ಈ ಹಿಂದೆ ದೂರು ನೀಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ