ಮಾಲೂರು : ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಭೂ ಪರಿವರ್ತನೆಗೆ ಲಂಚ ಸ್ವೀಕರಿಸುತ್ತಿದ್ದ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಆರ್. ಐ ಗೋಪಾಲಕೃಷ್ಣ ಹಾಗೂ ಕೇಸ್ ವರ್ಕರ್ ನಾಗೇಂದ್ರ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಭೂ ಪರಿವರ್ತನೆಗೆ ಹೊಸಕೋಟೆ ಮೂಲದ ಮಹೇಶ್ ಎಂಬುವರಿಂದ 4.5 ಲಕ್ಷ ರೂ. ಹಣ ತೆಗೆದುಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಹೇಶ್ ಅವರು ಮಾಲೂರು ತಾಲ್ಲೂಕಿನ ಆಲಂಬಾಡಿ ಗ್ರಾಮದಲ್ಲಿ 5 ಎಕರೆ ಭೂಮಿ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಭೂ ಪರಿವರ್ತನೆ ಮಂಜೂರಾತಿಗಾಗಿ ಆರೋಪಿಗಳು 4.5 ಲಕ್ಷ ರೂ. ಹಣ ಡಿಮ್ಯಾಂಡ್ ಮಾಡಿದ್ದರು.ಸದ್ಯ ಕೋಲಾರ ಲೋಕಾಯುಕ್ತ ಎಸ್‌ಪಿ ಧನಂಜಯ್ಯ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೋಲಾರ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಕೋಲಾರದ ಸೆಷನ್ಸ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದಾರೆ.