ಗೋಕರ್ಣ-ಪೂರ್ವ ನಿಗದಿತ ಕಾರ್ಯಕ್ರಮದಂತೆ ಬುಧವಾರ ಗೃಹ ಸಚಿವ ಜಿ ಪರಮೇಶ್ವರ್ ಅವರು ಗೋಕರ್ಣಕ್ಕೆ ಭೇಟಿ ನೀಡಿದ್ದಾರೆ. `ಆತ್ಮಲಿಂಗ ದರ್ಶನ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ನನಗೆ ಆ ಭಾಗ್ಯ ಸಿಕ್ಕಿದ್ದು, ನಾಡಿನ ಒಳತಿಗಾಗಿ ಪ್ರಾರ್ಥಿಸಿದ್ದೇನೆ’ ಎಂದವರು ಹೇಳಿದ್ದಾರೆ.
`ಗೋಕರ್ಣ ಅತ್ಯಂತ ಐತಿಹಾಸಿಕ ಕ್ಷೇತ್ರ. 25 ವರ್ಷಗಳ ಹಿಂದೆ ಒಮ್ಮೆ ಇಲ್ಲಿ ಬಂದಿದ್ದೆ. ಈಗಲೂ ಆತ್ಮಲಿಂಗ ದರ್ಶನ ಮಾಡಿ, ಒಳತು ಮಾಡು ಎಂದು ಬೇಡಿಕೊಂಡಿದ್ದೇನೆ’ ಎಂದರು. `ಇಲಾಖೆಯ ಕಾರ್ಯ ಚಟುವಟಿಕೆಗಳು ಹಾಗೂ ಕಾನೂನು ಸುವ್ಯವಸ್ಥೆಯ ವಿಚಾರ ಚರ್ಚೆ ಮಾಡಲು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಸಭೆ ನಡೆಸುವೆ’ ಎಂದವರು ಮಾಧ್ಯಮಗಳಿಗೆ ತಿಳಿಸಿದರು.
ದೇವಾಲಯದಲ್ಲಿ ಬೇಡ ರಾಜಕೀಯ ವಿಷಯ!
`ದೇವಾಲಯದ ಆವರಣದಲ್ಲಿ ರಾಜಕೀಯ ವಿಷಯಗಳ ಪ್ರಶ್ನೆ ಕೇಳಬೇಡಿ’ ಎಂದು ಮನವಿ ಮಾಡಿದರು. ಅದಾಗಿಯೂ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆಬ್ಬಿಸಿದ ಹನಿಟ್ರಾಪ್ ಹಾಗೂ ಶಾಸಕರ ಅಮಾನತು ಕುರಿತು ಅವರು ಉತ್ತರಿಸಿದರು.
`ಸದನ ನಡೆಸುವ ಸಭಾಧ್ಯಕ್ಷರಿಗೆ ಎಲ್ಲವೂ ಗೊತ್ತಿದೆ. ಅವರು ಶಾಸಕರ ಅಮಾನತು ಮಾಡಿದ್ದು, ಅವರ ನಿರ್ಣಯವನ್ನು ನಾವು ಪ್ರಶ್ನಿಸುವುದಿಲ್ಲ. ಸಭಾಧ್ಯಕ್ಷರ ನಿರ್ಣಯವನ್ನು ಗೌರವಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
`ಹನಿಟ್ರಾಪ್ ವಿಷಯವಾಗಿ ರಾಜಣ್ಣ ಅವರು ದೂರು ನೀಡಿಲ್ಲ. ಅವರು ನನಗೆ ಮನವಿ ನೀಡಿದ್ದಾರೆ. `ಕಾನೂನಿನ ಪ್ರಕಾರ ಅವರು ನನಗೆ ಮನವಿ ನೀಡಬಹುದೇ ವಿನ: ದೂರು ನೀಡಲು ಬರುವುದಿಲ್ಲ. ದೂರು ನೀಡುವುದಾದರೆ ಪೊಲೀಸ್ ಠಾಣೆಗೆ ದೂರು ಕೊಡಬೇಕು. ಅವರು ಕೊಟ್ಟ ಮನವಿಯನ್ನು ಕಾನೂನಿನ ಚೌಕಟ್ಟಿನ ಅಡಿ ಪರಿಶೀಲಿಸುವೆ’ ಎಂದು ಹೇಳಿದರು.